ರಾಕ್‍ಲೈನ್ ವೆಂಕಟೇಶ್ ಸಹೋದರನ ಮನೆಯಲ್ಲಿ ಕಳ್ಳತನ ಪ್ರಕರಣ: 7 ಮಂದಿಯ ಬಂಧನ
ಬೆಂಗಳೂರು: ವಿದೇಶ ಪ್ರವಾಸಕ್ಕೆ ತೆರಳಿದ್ದ ಚಿತ್ರ ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಸಹೋದರನ ಮನೆಯಲ್ಲಿ ಕಳ್ಳತನ ಎಸಗಿದ್ದ ಪ್ರಕರಣಕ್ಕೆ ಸಂಬಂಧ ಏಳು ಮಂದಿ ಆರೋಪಿಗಳನ್ನು ಇಲ್ಲಿನ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.
ಬಂಧಿತರನ್ನು ನೇಪಾಳ ಮೂಲದ ಉಪೇಂದ್ರ ಬಹದ್ದೂರ್ ಶಾಹಿ, ನಾರಾ ಬಹದ್ದೂರ್ ಶಾಹಿ, ಖಾಕೇಂದ್ರ ಬಹದ್ದೂರ್ ಶಾಹಿ, ಕೋಮಲ್ ಶಾಹಿ, ಸ್ವಸ್ತಿಕ್ ಶಾಹಿ, ಪಾರ್ವತಿ ಶಾಹಿ ಹಾಗೂ ಶಾದಲ ಶಾಹಿ ಎಂದು ಗುರುತಿಸಲಾಗಿದೆ.
ಬಂಧಿತರ ಪೈಕಿ ಆರೋಪಿಯೊಬ್ಬ ರಾಕ್‍ಲೈನ್ ವೆಂಕಟೇಶ್ ಸಹೋದರ ಭ್ರಮರೇಶ್ ಅವರ ಮನೆಯ ಪಕ್ಕದಲ್ಲೇ ನಿರ್ಮಾಣ ಹಂತದ ಕಟ್ಟಡದ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿಕೊಂಡಿದ್ದ. ಆತನೊಂದಿಗೆ ಉಳಿದ ಐವರು ಆರೋಪಿಗಳು ವಾಸವಿದ್ದರು.
ಮಹಾಲಕ್ಷ್ಮೀ ಲೇಔಟ್‍ನ ನಾಗಪುರ ವಾರ್ಡ್‍ನಲ್ಲಿ ವಾಸವಿರುವ ಭ್ರಮರೇಶ್ ಅ.21ರಂದು ಕುಟುಂಬ ಸಮೇತರಾಗಿ ವಿದೇಶ ಪ್ರವಾಸಕ್ಕೆ ತೆರಳಿದ್ದರು. ಅ.29ರಂದು ಮರಳಿ ಮನೆಗೆ ಬಂದಾಗ ಕಳ್ಳತನವಾಗಿರುವುದು ತಿಳಿದುಬಂದಿತ್ತು.
ಮೂರು ತಿಂಗಳುಗಳಿಂದಲೂ ಆರೋಪಿಗಳು ಭ್ರಮರೇಶ್ ಮನೆಯ ಮೇಲೆ ಕಣ್ಣಿಟ್ಟಿದ್ದರು. ಭ್ರಮರೇಶ್ ಕುಟುಂಬ ಸಮೇತ ವಿದೇಶ ಪ್ರವಾಸಕ್ಕೆ ತೆರಳಿರುವುದನ್ನು ಅರಿತು ಆರೋಪಿಗಳು ಕಳ್ಳತನ ಕೃತ್ಯಕ್ಕೆ ಸಂಚು ರೂಪಿಸಿದ್ದರು. ಅದರಂತೆ ತಾವಿದ್ದ ನಿರ್ಮಾಣ ಹಂತದ ಕಟ್ಟಡದಿಂದ ಭ್ರಮರೇಶ್ ಮನೆಯ ಕಟ್ಟಡಕ್ಕೆ ಜಿಗಿದು ಕಿಟಕಿಯ ಸರಳುಗಳನ್ನು ಮುರಿದು ಒಳ ಪ್ರವೇಶಿಸಿದ್ದರು. ಬಳಿಕ ಮನೆಯಲ್ಲಿದ್ದ 5 ಕೆಜಿ ಚಿನ್ನಾಭರಣ ಮತ್ತು 6 ಲಕ್ಷ ರೂಪಾಯಿ ನಗದು ಕಳ್ಳತನ ಮಾಡಿ ಪರಾರಿಯಾಗಿದ್ದರು.
ಭ್ರಮರೇಶ್ ನೀಡಿದ್ದ ದೂರಿನನ್ವಯ ಕಾರ್ಯಾಚರಣೆ ಕೈಗೊಂಡ ಮಹಾಲಕ್ಷ್ಮಿ ಲೇಔಟ್ ಠಾಣಾ ಪೊಲೀಸರು, ಕೃತ್ಯ ನಡೆದ ಸ್ಥಳದ ಬೆರಳಚ್ಚು ಹಾಗೂ ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಕೈಗೊಂಡು 7 ಮಂದಿ ಆರೋಪಿಗಳನ್ನು ಬಂಧಿಸಿ, ಆರೋಪಿಗಳಿಂದ 1.53 ಕೋಟಿ ರೂ. ಮೌಲ್ಯದ 3.01 ಕೆ.ಜಿ. ಚಿನ್ನಾಭರಣ, 562 ಗ್ರಾಂ ಬೆಳ್ಳಿ, 16 ವಿವಿಧ ಕಂಪೆನಿಯ ವಾಚ್‍ಗಳು ಹಾಗೂ 40 ಸಾವಿರ ರೂ. ನಗದು ವಶಪಡಿಸಿಕೊಂಡಿದ್ದಾರೆ.
ಬಂಧಿತರ ಪೈಕಿ ಓರ್ವ ವ್ಯಕ್ತಿ ಹಳೆಯ ರೂಢಿಗತ ಆರೋಪಿಯಾಗಿದ್ದು, ಬೆಂಗಳೂರು, ಆಂಧ್ರಪ್ರದೇಶ ಹಾಗೂ ಮಹಾರಾಷ್ಟ್ರ ಸೇರಿದಂತೆ ಸುಮಾರು 15 ಪ್ರಕರಣಗಳಲ್ಲಿ ಭಾಗಿಯಾಗಿರುವುದು ಗೊತ್ತಾಗಿದೆ. ಪ್ರಕರಣದಲ್ಲಿ ಇನ್ನೂ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಮಾಹಿತಿ ನೀಡಿದ್ದಾರೆ.