ʼಸಬ್ ಕಾ ಸಾಥ್, ಸಬ್ ಕಾ ವಿಕಾಸ್ʼ ಮೂಲಮಂತ್ರದಡಿ ಕೇಂದ್ರದ ಅಭಿವೃದ್ಧಿ ಕಾರ್ಯ: ಭೂಪೇಂದ್ರ ಯಾದವ್
ಬೆಂಗಳೂರು: ದೇಶದಲ್ಲಿ ಮೋದಿ ಗ್ಯಾರಂಟಿ ಎಂದರೆ ಅದು ನೈಜ ಗ್ಯಾರಂಟಿ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ. ವಿಕಸಿತ ಭಾರತ ಯಾತ್ರೆಯಿಂದ ಇದು ಸಾಧ್ಯವಾಗಿದೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ವಿಶ್ಲೇಷಿಸಿದರು.
ನಗರದ ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಳ್ಳು ಗ್ಯಾರಂಟಿಗಳ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬ ವಿಷಯವನ್ನು ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ತಿಳಿಸುವಂತೆ ಅವರು ಮನವಿ ಮಾಡಿದರು.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸಗಡದ ಜನತೆ ಕಾಂಗ್ರೆಸ್ ಪಕ್ಷದ ಸುಳ್ಳು ಗ್ಯಾರಂಟಿಯನ್ನು ತಿರಸ್ಕರಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 400 ಸೀಟುಗಳೊಂದಿಗೆ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2014ರಲ್ಲಿ ಮೋದಿಜೀ ಅವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೂಲಮಂತ್ರದಡಿ ಕಾರ್ಯ ನಿರ್ವಹಿಸಿದೆ. ಬಿಜೆಪಿ ತುಷ್ಟೀಕರಣ ನೀತಿಯನ್ನು ದೂರ ಮಾಡಿ ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿ ಕಡೆ ಗಮನ ಕೊಟ್ಟಿದೆ ಎಂದು ವಿವರಿಸಿದರು.
ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಮೂಲಕ ಭಾರತದ ಜಾಗೃತಿ ಕಾರ್ಯ ನಡೆದಿದೆ. ಹೆಮ್ಮೆಯ ದೇಶವನ್ನಾಗಿ ಭಾರತವನ್ನು ಕೊಂಡೊಯ್ಯಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹೆಜ್ಜೆ ಮುಂದಿಟ್ಟಿದ್ದೇವೆ ಎಂದು ಅವರು ನುಡಿದರು.
ದಲಿತ ಮಹಿಳೆಯನ್ನು ರಾಷ್ಟ್ರಪತಿ ಮಾಡಲು ನಾವು ಮುಂದಾದರೆ, ಕಾಂಗ್ರೆಸ್ಸಿಗರು ಅದರ ವಿರುದ್ಧ ಮತ ಚಲಾಯಿಸಿದರು. ಕಾಂಗ್ರೆಸ್ ಪಕ್ಷವು ದೇಶವನ್ನು ಜಾತಿಗಳಲ್ಲಿ ಹಂಚುವ ಕೆಲಸ ಮಾಡುತ್ತಿದೆ. ಒಬಿಸಿ ಸಮಾಜಕ್ಕೆ ಸಾಂವಿಧಾನಿಕ ಹಕ್ಕು ಕೊಡಲು ಮುಂದಾದರೆ ಅದನ್ನೂ ಕಾಂಗ್ರೆಸ್ ವಿರೋಧಿಸಿದೆ ಎಂದು ಆಕ್ಷೇಪಿಸಿದರು.
ಕಾಂಗ್ರೆಸ್ ಪಕ್ಷವು ದೇಶವನ್ನು ಧರ್ಮದ ಆಧಾರದಲ್ಲಿ ಹಂಚಿತು. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತ ಮತಬ್ಯಾಂಕ್ ಎಂದು ದೇಶವನ್ನು ಹಂಚಿದ ಕಾಂಗ್ರೆಸ್ ಪಕ್ಷವು ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿತ್ತು. ಅಲ್ಪಸಂಖ್ಯಾತರ ತುಷ್ಟೀಕರಣವನ್ನಷ್ಟೇ ಕಾಂಗ್ರೆಸ್ ಮಾಡಿದೆ ಎಂದು ದೂರಿದರು.