ಬಿಜೆಪಿ-ಜೆಡಿಎಸ್ ನಾಯಕರು ಪಾದಯಾತ್ರೆ ಮೂಲಕ ರಾಜಕೀಯ ನಾಟಕ ಮಾಡುತ್ತಿದ್ದಾರೆ : ಸಲೀಂ ಅಹ್ಮದ್
ಬೆಂಗಳೂರು : ಉದ್ದೇಶ ಪೂರಕವಾಗಿ ಸರಕಾರಕ್ಕೆ ಕೆಟ್ಟ ಹೆಸರಲು ತರಲು ಬಿಜೆಪಿ ಮತ್ತು ಜೆಡಿಎಸ್ ನಾಯಕರು ಪಾದಯಾತ್ರೆ ಮೂಲಕ ರಾಜಕೀಯ ನಾಟಕ ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ತಿನ ಮುಖ್ಯ ಸಚೇತಕ ಸಲೀಂ ಅಹ್ಮದ್ ಟೀಕಿಸಿದ್ದಾರೆ.
ಮಂಗಳವಾರ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇದೊಂದು ರಾಜಕೀಯ ನಾಟಕವಷ್ಟೇ. ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಇದೇ ವಿಚಾರವಾಗಿ ಸದನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತರ ಕೊಡಲು ಮುಂದಾದಾಗ ಗದ್ದಲ ಎಬ್ಬಿಸಿದರು. ಇದೀಗ ಹೊರಗಡೆ ನಾಟಕಕ್ಕೆ ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಈ ಹಿಂದೆ ನಾಲ್ಕು ವರ್ಷ ಅಧಿಕಾರದಲ್ಲಿ ಬಿಜೆಪಿ ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿ ರಾಜ್ಯದ ಹೆಸರನ್ನೆ ಹಾಳು ಮಾಡಿತ್ತು. ಆದರೆ, ಇದೀಗ ವಿಪಕ್ಷ ಆಗಿಯೂ ವಿಫಲವಾಗಿದ್ದು, ನಿರ್ದಿಷ್ಟ ದಾಖಲೆ ಇಲ್ಲದೇ ಮುಂಡಾ ವಿಚಾರದಲ್ಲಿ ಗಾಳಿಯಲ್ಲಿ ಗುಂಡು ಹೊಡೆಯುತ್ತಿದ್ದಾರೆ ಎಂದು ಅವರು ಆರೋಪಿಸಿದರು.
40 ವರ್ಷ ರಾಜಕೀಯದಲ್ಲಿ ಯಾವುದೇ ಆರೋಪ ಇಲ್ಲದೆ ಸಿದ್ದರಾಮಯ್ಯ ಅವರು ಕೆಲಸ ಮಾಡಿದ್ದು, ಇದನ್ನು ಸಹಿಸದೆ ಬಿಜೆಪಿ ನಾಯಕರು ಇಲ್ಲಸಲ್ಲದ ಆರೋಪಕ್ಕೆ ಮುಂದಾಗುತ್ತಿದ್ದಾರೆ. ಜತೆಗೆ, ಕೇಂದ್ರ ಸರಕಾರವೂ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದೆ ಎಂದ ಅವರು, ಶೀಘ್ರದಲ್ಲಿಯೇ ನಾವು ಸಹ ಬಿಜೆಪಿ ಕಾಲದಲ್ಲಿ ನಡೆದಿದ್ದ ಬಹುಕೋಟಿ ಹಗರಣಗಳನ್ನು ಬಯಲು ಮಾಡುತ್ತೇವೆ ಎಂದರು.