ಚುನಾವಣೆಗಾಗಿ ಬಿಜೆಪಿಯಿಂದ ‘ಸಂವಿಧಾನ್ ಸಮ್ಮಾನ್’ : ಪ್ರಿಯಾಂಕ್ ಖರ್ಗೆ ಟೀಕೆ
ಪ್ರಿಯಾಂಕ್ ಖರ್ಗೆ
ಬೆಂಗಳೂರು : ಬಿಜೆಪಿಯವರು ರಾಜ್ಯದಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮುಗಿಯುವವರೆಗೂ ‘ಸಂವಿಧಾನ್ ಸಮ್ಮಾನ್’ ಕಾರ್ಯಕ್ರಮ ನಡೆಸುತ್ತಾರಂತೆ. ಈ ನಾಟಕ ಕೇವಲ ಚುನಾವಣೆಯ ದೃಷ್ಟಿಯಿಂದ ಹೊರತು ಸಂವಿಧಾನದ ಮೇಲಿನ ಪ್ರೀತಿಯಿಂದಲ್ಲ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಶನಿವಾರ ಎಕ್ಸ್ನಲ್ಲಿ ಪೋಸ್ಟ್ ಹಾಕಿರುವ ಅವರು, ಬಾಬಾ ಸಾಹೇಬರನ್ನು ಅವಮಾನಿಸಿದ ಬಿಜೆಪಿ ಈಗ ತಾನು ದಲಿತ ಪರ ಎಂದು ತೋರಿಸಿಕೊಳ್ಳಲು ಟೂಲ್ಕಿಟ್ ತಯಾರಿ ಮಾಡಿರುವುದು ಕುಚೋದ್ಯದ ಸಂಗತಿ. ರಾಜ್ಯ ಬಿಜೆಪಿ ತಾನು ದಲಿತ ಪರ ಎಂದು ಬೋರ್ಡ್ ಹಾಕಿಕೊಳ್ಳುವುದು, ಕಳ್ಳ ನರಿಯೊಂದು ಸನ್ಯಾಸಿಯ ವೇಷ ಹಾಕಿದಂತೆ ಎಂದು ಹೇಳಿದ್ದಾರೆ.
ಬಿಜೆಪಿಯ ಈ ಹೊಸ ಟೂಲ್ಕಿಟ್ ದೇಶಾದ್ಯಂತ ಸಂವಿಧಾನ ಹಾಗೂ ಅಂಬೇಡ್ಕರ್ ರವರ ಅನುಯಾಯಿಗಳ ಪ್ರತಿರೋಧದಿಂದ ಬಿಜೆಪಿ ಬೆಚ್ಚಿ ಬಿದ್ದಿರುವುದಕ್ಕೆ ಸಾಕ್ಷೀಕರಿಸುತ್ತದೆ. ಸಂವಿಧಾನ ಬದಲಿಸುತ್ತೇವೆ ಎಂದವರು ಈಗ ಸಂವಿಧಾನ ಪೀಠಿಕೆ ಪಠಣ ಮಾಡುವುದನ್ನು ನಂಬಬೇಕೇ? ಎಂದು ಅವರು ಪ್ರಶ್ನಿಸಿದ್ದಾರೆ.
ಮನುಸ್ಮೃತಿಯ ವಕ್ತಾರರು ದಲಿತರನ್ನು ಮನೆಗೆ ಕರೆದು ಊಟ ಹಾಕುವುದು ಬೂಟಾಟಿಕೆಯಲ್ಲವೇ? ಸಂವಿಧಾನವನ್ನು ತಿರಸ್ಕರಿಸಿ ಮನುಸ್ಮೃತಿಯನ್ನು ಪ್ರತಿಪಾದಿಸಿದ್ದ ಆರೆಸ್ಸೆಸ್ನ ಸಂಜಾತರು ‘ಸಂವಿಧಾನ್ ಸಮ್ಮಾನ್’ ಕಾರ್ಯಕ್ರಮ ಮಾಡುವುದು ಸದಾರಮೆ ನಾಟಕವಲ್ಲವೇ? ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ಮುಗಿಯುವವರೆಗೂ ಸಂವಿಧಾನ್ ಸಮ್ಮಾನ್ ಕಾರ್ಯಕ್ರಮ ನಡೆಸುತ್ತಾರಂತೆ. ಈ ನಾಟಕ ಕೇವಲ ಚುನಾವಣೆಯ ದೃಷ್ಟಿಯಿಂದ ಹೊರತು ಸಂವಿಧಾನದ ಮೇಲಿನ ಪ್ರೀತಿಯಿಂದಲ್ಲ ಎನ್ನುವುದಕ್ಕೆ ಬೇರೆ ಪುರಾವೆ ಬೇಕೇ? ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ಸಂವಿಧಾನದ ಪೀಠಿಕೆಯಲ್ಲಿನ ಜಾತ್ಯಾತೀತ, ಸಮಾಜವಾದ ಪದಗಳನ್ನು ಸಹಿಸದ ವರ್ಣಾಶ್ರಮದ ಪ್ರತಿಪಾದಕರು, ಸಮಾನತೆಯ ವಿರೋಧಿಗಳು ಈಗ ಕೈಯ್ಯಲ್ಲಿ ಸಂವಿಧಾನ ಹಿಡಿಯಲು ಹೊರಟಿದ್ದಾರೆ, ಇದು ಸಂವಿಧಾನ ಹಾಗೂ ಅಂಬೇಡ್ಕರ್ ರವರ ಮೇಲಿನ ಪ್ರೀತಿಯಿಂದಲ್ಲ, ಜನರು ತೋರಿದ ಪ್ರತಿರೋಧದ ಭಯದಿಂದ ಹಾಗೂ ಅಮಿತ್ ಶಾ ಅವರನ್ನು ರಕ್ಷಿಸುವ ಉದ್ದೇಶದಿಂದ ಎಂದು ಅವರು ದೂರಿದ್ದಾರೆ.
ಬಿಜೆಪಿಗೆ ನಿಜಕ್ಕೂ ಸಂವಿಧಾನ ಹಾಗೂ ಅಂಬೇಡ್ಕರ್ ಅವರ ಮೇಲೆ ಪ್ರೀತಿ ಇದ್ದರೆ ಅಮಿತ್ ಶಾ ಅವರ ರಾಜೀನಾಮೆ ಪಡೆಯಲಿ, ಬಿಜೆಪಿಗೆ ಅಮಿತ್ ಶಾ ಮುಖ್ಯವಲ್ಲ, ಸಂವಿಧಾನ ಮುಖ್ಯ ಎನ್ನುವುದನ್ನು ನಿರೂಪಿಸಲಿ ಎಂದು ಪ್ರಿಯಾಂಕ್ ಖರ್ಗೆ ಸವಾಲು ಹಾಕಿದ್ದಾರೆ.