ಶಕ್ತಿ ಯೋಜನೆ | ನಾಲ್ಕು ನಿಗಮಗಳಿಗೆ 6543 ಕೋಟಿ ರೂ. ಬಿಡುಗಡೆ : ಸಂತೋಷ್ ಲಾಡ್
ಸಾಂದರ್ಭಿಕ ಚಿತ್ರ
ಬೆಳಗಾವಿ: ಶಕ್ತಿ ಯೋಜನೆಗೆ ರಾಜ್ಯದಲ್ಲಿ ಉತ್ತಮ ಸ್ಪಂದನೆ ದೊರೆತಿದೆ. ರಾಜ್ಯ ಸರಕಾರದಿಂದ ಪ್ರಸಕ್ತ ಸಾಲಿನ ನವೆಂಬರ್ ವರೆಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ 6543 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧಾನ ಸಭೆಯಲ್ಲಿ ಮಾಹಿತಿ ನೀಡಿದರು.
ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಡಾ.ಸಿ.ಎನ್.ಅಶ್ವಥ್ ನಾರಾಯಣ ಕೇಳಿದ ಪ್ರಶ್ನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರವಾಗಿ ಅವರು ಉತ್ತರಿಸಿದರು.
ಶಕ್ತಿ ಯೋಜನೆ ಜಾರಿಯಾದಾಗಿನಿಂದ ನಾಲ್ಕು ನಿಗಮದ ಬಸ್ಗಳಲ್ಲಿ ಪ್ರತಿನಿತ್ಯ 1.16 ಕೋಟಿ ಜನರು ಪ್ರಯಾಣ ಮಾಡುತ್ತಿದ್ದಾರೆ. ಸರಕಾರ ಶಕ್ತಿಯೋಜನೆಯಡಿ 8237 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ. ಇದರಲ್ಲಿ 6543 ಕೋಟಿ ರೂ. ಈಗಾಗಲೇ ನಿಗಮಗಳಿಗೆ ಪಾವತಿ ಮಾಡಿದ್ದು, ಉಳಿದ 1694 ಕೋಟಿ ರೂ.ಗಳನ್ನು ಹಂತ ಹಂತವಾಗಿ ನಿಗಮಗಳಿಗೆ ನೀಡಲಾಗುವುದು ಎಂದು ಅವರು ಹೇಳಿದರು.
ಸಾರಿಗೆ ನಿಗಮದ ನೌಕರರೊಂದಿಗೆ ಸಂಧಾನ: ಸಾರಿಗೆ ನಿಗಮಗಳ ನೌಕರರ ವೇತನವನ್ನು ಕೈಗಾರಿಕಾ ಒಪ್ಪಂದಗಳ ಅನ್ವಯ, ಪ್ರತಿ 4 ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು. ಕೋವಿಡ್ ಕಾರಣದಿಂದ ಕಳೆದ ಬಾರಿ 2020ಕ್ಕೆ ಪರಿಷ್ಕರಿಸಬೇಕಾದ ವೇತನವನ್ನು 2023ರಲ್ಲಿ ಪರಿಷ್ಕರಿಸಲಾಯಿತು. ಡಿ.31ರ ಒಳಗಾಗಿ ಖುದ್ದು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ನಿಗಮದ ನೌಕರರೊಂದಿಗೆ ಸಂಧಾನ ಒಪ್ಪಂದ ಮಾಡಿಕೊಳ್ಳಲಿದ್ದಾರೆ. ಯಾವುದೇ ಕಾರಣಕ್ಕೂ ನೌಕರರು ಮುಷ್ಕರ ಹೂಡದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.
4304 ಬಸ್ ಖರೀದಿ: 5000 ಬಸ್ ಖರೀದಿಸುವುದಾಗಿ ಸರಕಾರ ಹೇಳಿತ್ತು. ಇದರಂತೆ ಇದುವರೆಗೂ 4304 ಬಸ್ಗಳನ್ನು ಖರೀದಿಸಲಾಗಿದೆ. ಉಳಿದ ಬಸ್ಗಳನ್ನು ಸಹ ಶೀಘ್ರ ಖರೀದಿಸಿ ಅಗತ್ಯ ಇರುವ ಕಡೆ ನೀಡಲಾಗುವುದು ಎಂದು ಸಂತೋಷ್ ಲಾಡ್ ಹೇಳಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಸರಕಾರ ಕೂಡಲೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಬೇಕು. ನೌಕರರು ಜನವರಿಯಿಂದ ಮುಷ್ಕರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಕುರಿತು ಮನೆಗೆ ಬಂದು ಮನವಿಯನ್ನು ನೀಡಿದ್ದಾರೆ ಎಂದರು.
ಡಾ.ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿ, ಸರಕಾರ ಸಾರಿಗೆ ನಿಗಮಗಳಿಗೆ ನೀಡಬೇಕಾದ ಬಾಕಿ ಹಣ ನೀಡಿ ವೇತನ ಪರಿಷ್ಕರಣೆಗೆ ಅನುವು ಮಾಡಿಕೊಡಬೇಕು ಎಂದು ಕೋರಿದರು. ಈ ಮನವಿಗೆ ಹಲವು ಶಾಸಕರು ಧ್ವನಿಗೂಡಿಸಿದರು.