ಕಾಶ್ಮೀರದ ಪರಿಸ್ಥಿತಿ ತುಂಬಾ ಭಯಾನಕವಾಗಿದೆ : ಸಚಿವ ಸಂತೋಷ್ ಲಾಡ್
ಬೆಂಗಳೂರು : ಕಾಶ್ಮೀರದ ಪರಿಸ್ಥಿತಿ ತುಂಬಾ ಭಯಾನಕವಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಕಾಶ್ಮೀರಕ್ಕೆ ಹೋಗುವುದು ಅಂದರೆ ಸ್ಮಶಾನಕ್ಕೆ ಹೋದಂತೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಗುರುವಾರ ಕಾಶ್ಮೀರದಿಂದ ಕನ್ನಡಿಗ ಪ್ರವಾಸಿಗರನ್ನು ವಿಶೇಷ ವಿಮಾನದ ಮೂಲಕ ಕರೆದುಕೊಂಡು ಬಂದ ನಂತರ ಕೆಂಪೇಗೌಡ ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಕಾಶ್ಮೀರದಲ್ಲಿ ಎಲ್ಲಿ ನೋಡಿದರು ಮಿಲಿಟರಿ ಮತ್ತು ಪ್ಯಾರಾ ಮಿಲಿಟರಿ ಪಡೆಗಳು ಇವೆ. ಈ ಘಟನೆ ನಂತರ ಪ್ರವಾಸಿಗರಲ್ಲಿ ಮನೆ ಮಾಡಿದ್ದ ಭಯ ಮತ್ತು ಆತಂಕವನ್ನು ವಿವರಿಸಲು ಸಾಧ್ಯವಿಲ್ಲ. ಅಲ್ಲಿ ಏನಾಗಬಹುದು ಎಂದು ಯಾರಿಗೂ ಗೊತ್ತಿಲ್ಲ. ಕನ್ನಡಿಗರನ್ನು ಸುರಕ್ಷಿತವಾಗಿ ಬೆಂಗಳೂರಿಗೆ ಕರೆ ತರುವುದು ನಮ್ಮ ಆದ್ಯತೆಯಾಗಿತ್ತು ಎಂದು ಸಂತೋಷ್ ಲಾಡ್ ಹೇಳಿದರು.
ಕಾಶ್ಮೀರದಲ್ಲಿರುವವರೆಗೂ ನಾನು ಸೇರಿದಂತೆ ಎಲ್ಲರೂ ಭಯದ ವಾತಾವರಣದಲ್ಲೇ ಇದ್ದೆವು. ನಾನು 40ಕ್ಕೂ ಹೆಚ್ಚು ಸ್ಥಳಗಳಿಗೆ ಭೇಟಿ ನೀಡಿ ಪ್ರವಾಸಿಗರೊಂದಿಗೆ ವೈಯಕ್ತಿಕವಾಗಿ ಮಾತನಾಡಿದೆ. ಬಹುತೇಕ ಕನ್ನಡಿಗರು ಹಿಂದಿರುಗಿದ್ದಾರೆ. ನಮ್ಮ ರಾಜ್ಯದವರು ಯಾರೊಬ್ಬರೂ ಅಲ್ಲಿ ಈಗ ತೊಂದರೆಗೆ ಸಿಲುಕಿಕೊಂಡಿಲ್ಲ ಎಂದು ಅವರು ತಿಳಿಸಿದರು