‘ಗಿಗ್’ ಕಾರ್ಮಿಕರ ಮಂಡಳಿ ರಚಿಸಿ, ತಜ್ಞರ ಅಭಿಪ್ರಾಯದ ಬಳಿಕ ಸೆಸ್ ತೀರ್ಮಾನ: ಸಂತೋಷ್ ಲಾಡ್

ಧಾರವಾಡ : ‘ಗಿಗ್’ ಆರ್ಥಿಕತೆಯಲ್ಲಿ ಪ್ರಮುಖ ಪಾತ್ರವಹಿಸುವ ಕಾರ್ಮಿಕರ ಆರೋಗ್ಯವನ್ನು ಗಮನದಲ್ಲಿ ಇಟ್ಟುಕೊಂಡು ಅಗ್ರಿಗೇಟರ್ ಸಂಸ್ಥೆಗಳಿಂದ ಸುಂಕ ಸಂಗ್ರಹವನ್ನು ಮಾಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ತಿಳಿಸಿದ್ದಾರೆ.
ಸೋಮವಾರ ಧಾರವಾಡದಲ್ಲಿ ವಾರ್ತಾ ಇಲಾಖೆಯ ಗಾಂಧಿ ಭವನ ಉದ್ಘಾಟನಾ ಸಮಾರಂಭದ ವೇಳೆ ಮಾತನಾಡಿದ ಅವರು, ‘ಗಿಗ್’ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ಕೆಲಸ ಮಾಡುತ್ತಾರೆ. ಅವರು ಸಾಮಾನ್ಯವಾಗಿ ಸೈಕಲ್ ಹಾಗೂ ಮೋಟಾರ್ ಬೈಕ್‍ಗಳಲ್ಲಿ ಡೆಲಿವರಿ ಕೆಲಸ ಮಾಡುತ್ತಾರೆ. ಹೀಗೆ ಅವರು ರಸ್ತೆಯಲ್ಲಿ ಸಾಗುವಾಗ ಅವರು ಸೇವಿಸುವ ಇಂಗಾಲದ ಪ್ರಮಾಣವೂ ಅಧಿಕವಾಗಿರುತ್ತದೆ. ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಕುಟುಂಬಕ್ಕಾಗಿ ಅವರು ದುಡಿಯುತ್ತಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಸೆಸ್ ಸಂಗ್ರಹ ಮಾಡಲಾಗುವುದು ಎಂದು ವಿವರಿಸಿದರು.
ಒಬ್ಬ ಗಿಗ್ ಕಾರ್ಮಿಕ ಸರಾಸರಿ ಇಪ್ಪತ್ತು ವರ್ಷ ಕೆಲಸ ಅವನು ಸೇವಿಸುವ ಕಾರ್ಬನ್ ಡೈಆಕ್ಸೆಡ್ ಪ್ರಮಾಣವೂ ಸಾಕಷ್ಟು ಇರುತ್ತದೆ. ಅವರ ಯೋಗಕ್ಷೇಮ ಸಹ ಮುಖ್ಯ. ಇಲ್ಲಿ ಬಹುರಾಷ್ಟ್ರೀಯ ಕಂಪೆನಿಗಳಿಗೆ ಲಾಭ ಅಥವಾ ನಷ್ಟ ಮಾಡುವ ವಿಚಾರ ಮುಖ್ಯವಲ್ಲ. ಗಿಗ್ ಕಾರ್ಮಿಕರ ಕ್ಷೇಮಾಭಿವೃದ್ಧಿ ಇಲಾಖೆಗೆ ಮುಖ್ಯ. ಅವರ ಕುಟುಂಬ ಮುಖ್ಯ. ಈ ನಿಟ್ಟಿನಲ್ಲಿ ನಾವು ಸೆಸ್ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಅವರು ತಿಳಿಸಿದರು.
ಎಲ್ಲ ಅಗ್ರಿಗೇಟರ್ ಕಂಪೆನಿಗಳಿಗೆ ಸಾರಾಸಗಟಾಗಿ ಶೇ.5ರಷ್ಟು ಸೆಸ್ ವಿಧಿಸುವುದಿಲ್ಲ. ಇದನ್ನು ಅವಸರದಲ್ಲಿ ಅಂತಿಮಗೊಳಿಸುವುದಿಲ್ಲ. ಗಿಗ್ ಮಂಡಳಿ ರಚನೆಗೆ ಸಂಪುಟ ಅನುಮೋದನೆ ನೀಡಿದೆ. ಮುಂದೆ ಮಂಡಳಿ ರಚನೆಯಾಗಲಿದೆ. ನಿಯಮ ರಚನೆ ಮಾಡುವಾಗ ಸಂಬಂಧಿಸಿದ ಎಲ್ಲರ ಅಭಿಪ್ರಾಯ ಪಡೆಯುತ್ತೇವೆ. ಆಸಕ್ತರನ್ನು ಸೇರಿಸಿ ಚರ್ಚೆ ಮಾಡುತ್ತೇವೆ. ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡುತ್ತೇವೆ. ಶೇ.5ರಷ್ಟು ಸೆಸ್ ಯಾರಿಗೆ ಸಂಗ್ರಹಿಸಬೇಕು. ಶೇ.5ರ ಒಳಗೆ ಯಾರಿಗೆ ಸಂಗ್ರಹ ಮಾಡಬೇಕು ಎಂದು ಮುಂದೆ ತೀರ್ಮಾನ ಮಾಡುತ್ತೇವೆ. ಅಂತಿಮಗಾಗಿ ಒಂದು ನಿರ್ಣಯ ಕೈಗೊಳ್ಳುತ್ತೇವೆ ಎಂದು ಮಾಹಿತಿ ನೀಡಿದರು.
ಇಂತಹ ಮಹತ್ವ ಪ್ರಯತ್ನದ ಹಿಂದೆ ನಮ್ಮ ಪಕ್ಷದ ಮುಖಂಡರಾದ ರಾಹುಲ್ ಗಾಂಧಿ ಶ್ರಮ ಇದೆ. ಗಿಗ್ ಕಾರ್ಮಿಕರ ಬಗ್ಗೆ ಅವರಿಗೆ ಅಪಾರವಾಗಿ ಕಾಳಜಿ ಇದೆ. ಭಾರತ್ ಜೋಡೊ ಯಾತ್ರೆ ವೇಳೆ ರಾಹುಲ್ ಗಾಂಧಿ ಇದರ ಬಗ್ಗೆ ಆಸಕ್ತಿ ತೋರಿದ್ದರು. ರಾಜಸ್ಥಾನದಲ್ಲಿ ಇದರ ಬಗ್ಗೆ ಮಸೂದೆ ಬಂದಿದೆ. ಇಡೀ ದೇಶದಲ್ಲೇ ಒಂದು ಅತ್ಯುತ್ತಮ ಮಸೂದೆಯನ್ನು ನಮ್ಮ ರಾಜ್ಯ ಮಾಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಈ ಕ್ರಮ ಕೈಗೊಂಡಿದೆ ಎಂದು ಹೇಳಿದರು.