ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ಮಾಸಿಕ 45ಸಾವಿರ ರೂ.ವೇತನ ನೀಡಿ : ಎಸ್.ಬಾಲನ್ ಆಗ್ರಹ
ಶುಶ್ರೂಷಾಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಧರಣಿ ಸತ್ಯಾಗ್ರಹ

ಬೆಂಗಳೂರು : ಸರಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ಖಾಯಂ ಶುಶ್ರೂಷಾಧಿಕಾರಿಗಳಿಗೆ ಮಾಸಿಕ 45ರಿಂದ 60 ಸಾವಿರ ರೂ.ವೇತನ ಇದೆ. ಅದೇ ರೀತಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಶುಶ್ರೂಷಾಧಿಕಾರಿಗಳಿಗೂ ಕನಿಷ್ಠ ವೇತನ 45ಸಾವಿರ ರೂ. ಮಾಸಿಕ ವೇತನ ಕೊಡಬೇಕು ಎಂದು ಹಿರಿಯ ವಕೀಲ ಎಸ್.ಬಾಲನ್ ಆಗ್ರಹಿಸಿದ್ದಾರೆ.
ಶುಕ್ರವಾರ ನಗರದ ಫ್ರೀಡಂ ಪಾರ್ಕ್‍ನಲ್ಲಿ ರಾಜ್ಯ ಗುತ್ತಿಗೆ ಶುಶ್ರೂಷಾಧಿಕಾರಿ ನೌಕರರ ಕ್ಷೇಮಾಭಿವೃದ್ಧಿ ಸಂಘವು ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಅವರು, 16 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ಪ್ರತಿ ತಿಂಗಳು ಕೇವಲ 15 ಸಾವಿರ ರೂ.ಮಾತ್ರ ವೇತನ ನೀಡಲಾಗುತ್ತಿದೆ. ಇದು ಅವರ ಸೇವಾ ಅವಧಿಗಿಂತ ಕಡಿಮೆ ವೇತನವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
16 ಸಾವಿರ ರೂ. ವೇತನದಲ್ಲಿ ಮನೆ ಬಾಡಿಗೆ, ಮಕ್ಕಳ ಶಾಲೆ, ಕಾಲೇಜು ಶುಲ್ಕ ಸೇರಿದಂತೆ ಮನೆ-ಸಂಸಾರ ನಿಭಾಯಿಸುವುದಾದರೂ ಹೇಗೆ? ಐದು ದಿನಗಳಿಂದ ಮನೆ ಮಕ್ಕಳು ಎಲ್ಲರನ್ನೂ ಬಿಟ್ಟು ಸ್ವಾತಂತ್ರ್ಯ ಉದ್ಯಾನವನದಲ್ಲಿ ಮಹಿಳೆಯರು ಅಹೋರಾತ್ರಿ ಧರಣಿ ಸತ್ಯಾಗ್ರಹ ಮಾಡುತ್ತಿದ್ದರೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇತ್ತ ಮುಖ ಮಾಡದೇ ಇರುವುದು ನಾಚಿಕೆಗೇಡು. ಸರಕಾರ ಈ ಕೂಡಲೇ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಶುಶ್ರೂಷಾಧಿಕಾರಿಗಳ ಸೇವೆಯನ್ನು ಖಾಯಂಗೊಳಿಸಬೇಕು ಎಂದು ಅವರು ಆಗ್ರಹಿಸಿದರು.
ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ಸುಪ್ರೀಂಕೋರ್ಟ್ ಆದೇಶದಂತೆ ಸಮಾನ ಕೆಲಸಕ್ಕೆ ಸಮಾನ ವೇತನ ನಿಗದಿಪಡಿಸಬೇಕು. ಕನಿಷ್ಠ ಪಕ್ಷ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ವೈದ್ಯಾಧಿಕಾರಿಗಳಿಗೆ ಇರುವ ಮೂಲ ವೇತನ ಮಾದರಿಯಂತೆ ವೇತನ ನಿಗದಿ ಪಡಿಸಬೇಕು. ಮುಂದಿನ ದಿನಗಳಲ್ಲಿ ವಿಶೇಷ ನೇರ ನೇಮಕಾತಿಯಲ್ಲಿ ಜೇಷ್ಠತೆಯ ಆಧಾರದ ಮೇಲೆ ಕೃಪಾಂಕ ನೀಡಿ, ವಯೋಮಿತಿ ಸಡಲಿಕೆ ಮಾಡಬೇಕು ಮತ್ತು ಎಲ್ಲ ನೌಕರರ ಸೇವೆಯನ್ನು ಖಾಯಂ ಮಾಡಿ ಉದ್ಯೋಗ ಭದ್ರತೆ ನೀಡಬೇಕು ಎಂದು ಬಾಲನ್ ಒತ್ತಾಯಿಸಿದರು.
ಧರಣಿ ಸತ್ಯಾಗ್ರಹದಲ್ಲಿ ಅಧ್ಯಕ್ಷೆ ರಾಧಸುರೇಶ್ ಪಿ.ಎನ್., ಉಪಾಧ್ಯಕ್ಷ ಸಂಗನ ಬಸವ, ಪ್ರಧಾನ ಕಾರ್ಯದರ್ಶಿ ಸೌಮ್ಯ ಶ್ರೀ.ಕೆ., ಖಜಾಂಚಿ ಆರ್.ರಜನಿ, ಕಾರ್ಯದರ್ಶಿ ವಿನೋದ ಎಚ್.ಆರ್, ಸಮತಾ ಸೈನಿಕ ದಳ ಅಧ್ಯಕ್ಷ ವೆಂಕಟಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.
ಆರನೇ ದಿನಕ್ಕೆ ಅಹೋರಾತ್ರಿ ಧರಣಿ: ಧರಣಿ ಸತ್ಯಾಗ್ರಹದಲ್ಲಿ ಭಾಗವಹಿಸಿ ಮಾತನಾಡಿದ ಪ್ರಧಾನ ಕಾರ್ಯದರ್ಶಿ ಸೌಮ್ಯಶ್ರೀ ಕೆ., ನಾಲ್ಕನೇ ದಿನದ ಹೋರಾಟದಂದು ಸಚಿವ ದಿನೇಶ್ ಗುಂಡೂರಾವ್ ಸಂಘದ ನಿಯೋಗವನ್ನು ಆರೋಗ್ಯ ಸೌಧಕ್ಕೆ ಕರೆಸಿಕೊಂಡು ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಬೇಡಿಕೆಗಳ ಬಗ್ಗೆ ಮಾ.10 ರಂದು ಚರ್ಚೆ ಮಾಡಲಾಗುವುದೆಂದು ಮೌಖಿಕವಾಗಿ ಭರವಸೆ ನೀಡಿದ್ದಾರೆ.
ಇದಕ್ಕೂ ಮೊದಲು ಹಲವು ಸುತ್ತಿನ ಹೋರಾಟಗಳನ್ನು ಮಾಡಿದಾಗಲೂ ಇದೇ ರೀತಿ ಭರವಸೆ ನೀಡಿದ್ದು, ಬೇಡಿಕೆಗಳನ್ನು ಈಡೇರಿಸದೇ ಇರುವುದರಿಂದ ಭರವಸೆಗಳ ಮೇಲಿನ ಭರವಸೆಯೇ ಹೋಗಿದೆ. ಆದುದರಿಂದ ವೈದ್ಯಕೀಯ ಕಾಲೇಜಿನ ಗುತ್ತಿಗೆ ಶುಶ್ರೂಷಾಧಿಕಾರಿಗಳಿಗೆ ನೀಡುತ್ತಿರುವಂತೆ ನಮಗೂ ಕೂಡ ಮೂಲ ವೇತನದ ಜಾರಿ ಕುರಿತು ಲಿಖಿತ ಆದೇಶ ನೀಡುವವರೆಗೂ ಅನಿರ್ಧಿಷ್ಟಾವಧಿ ಅಹೋರಾತ್ರಿ ಧರಣಿ ಸತ್ಯಾಗ್ರಹ ಮುಂದುವರೆಸುತ್ತೇವೆ ಎಂದು ಸೌಮ್ಯಶ್ರೀ ತಿಳಿಸಿದರು.