ಎಸ್‍ಸಿ-ಎಸ್‍ಟಿ ಪತ್ರಿಕಾ ಸಂಪಾದಕ ಸಂಘದ ವಾರ್ಷಿಕ ಪ್ರಶಸ್ತಿ ಪ್ರಕಟ
ಜಿ.ಎನ್.ಮೋಹನ್, ಮಾವಳ್ಳಿ ಶಂಕರ್, ಮಂಜುಳಾ ಸೇರಿ ಎಂಟು ಮಂದಿ ಆಯ್ಕೆ
ಬೆಂಗಳೂರು: ಕರ್ನಾಟಕ ರಾಜ್ಯ ಎಸ್‍ಸಿ-ಎಸ್‍ಟಿ ಪತ್ರಿಕಾ ಸಂಪಾದಕರ ಸಂಘದ 2024ನೆ ಸಾಲಿನ ರಾಜ್ಯ ಮಟ್ಟದ ದತ್ತಿ ಪ್ರಶಸ್ತಿಗಳು ಪ್ರಕಟವಾಗಿದ್ದು, ಪ್ರಶಸ್ತಿಗಳಿಗೆ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್, ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್, ಮಂಜುಳಾ ಹುಲಿಕುಂಟೆ ಸೇರಿ ಎಂಟು ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.
ಸಂಘದ ದತ್ತಿ ಪ್ರಶಸ್ತಿಗಳಾದ ಡಾ.ಬಿ.ಆರ್.ಅಂಬೇಡ್ಕರ್ ದತ್ತಿ ಪ್ರಶಸ್ತಿಗೆ ಪತ್ರಕರ್ತ ಜಿ.ಎನ್.ಮೋಹನ್, ಬಿ.ರಾಚಯ್ಯ ದತ್ತಿ ಪ್ರಶಸ್ತಿಗೆ ಪತ್ರಕರ್ತ ಬಿ.ಎಂ.ಹನೀಫ್, ಪ್ರೊ.ಬಿ.ಕೃಷ್ಣಪ್ಪ ದತ್ತಿ ಪ್ರಶಸ್ತಿಗೆ ದಸಂಸ ಪ್ರಧಾನ ಸಂಚಾಲಕ ಮಾವಳ್ಳಿ ಶಂಕರ್ ಮತ್ತು ಬಿ.ಬಸವಲಿಂಗಪ್ಪ ದತ್ತಿ ಪ್ರಶಸ್ತಿಗೆ ಪತ್ರಕರ್ತೆ ಮಂಜುಳಾ ಹುಲಿಕುಂಟೆ ಆಯ್ಕೆಯಾಗಿದ್ದಾರೆ.
ಪತ್ರಿಕಾ ಸಂಪಾದಕರಿಗೆ ನೀಡುವ ಗೌರವ ಪ್ರಶಸ್ತಿಗಳಿಗೆ ಶಿವಮೊಗ್ಗ ಮಲ್ನಾಡ್‍ವಾಣಿ ಪತ್ರಿಕೆಯ ಸಂಪಾದಕ ಕೆ.ಏಕಾಂತಪ್ಪ, ವಿಶಾಲವಾರ್ತೆ ಪತ್ರಿಕೆಯ ಸಂಪಾದಕ ಸೊಗಡು ವೆಂಕಟೇಶ್, ಜನೋದಯ ಪತ್ರಿಕೆಯ ಸಂಪಾದಕ ಮಂಜುಳಾ ಕಿರುಗಾವಲು, ಹೈದ್ರಾಬಾದ್ ಕರ್ನಾಟಕ ಮುಂಜಾವು ಪತ್ರಿಕೆಯ ಸಂಪಾದಕ ಸುರೇಶ್ ಸಿಂಧ್ಯೆ ಆಯ್ಕೆಯಾಗಿದ್ದಾರೆ.
ದತ್ತಿ ಪ್ರಶಸ್ತಿಗಳು ತಲಾ 10ಸಾವಿರ ರೂ. ನಗದು ಹಾಗೂ ಪತ್ರಿಕಾ ಸಂಪಾದಕರಿಗೆ ನೀಡುವ ಗೌರವ ಪ್ರಶಸ್ತಿಗಳು ತಲಾ 5 ಸಾವಿರ ರೂ. ನಗದು, ಪುರಸ್ಕಾರವನ್ನು ಒಳಗೊಂಡಿರುತ್ತದೆ. ನ.29ರಂದು ಬೆಂಗಳೂರಿನ ಗಾಂಧಿಭವನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪುರಸ್ಕೃತರಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸಂಘದ ಅಧ್ಯಕ್ಷ ಚೆಲುವರಾಜು ಪ್ರಕಟನೆಯಲ್ಲಿ ತಿಳಿಸಿದ್ದಾರೆ.