ವಾಲ್ಮೀಕಿ ನಿಗಮದಲ್ಲಿ ಹಗರಣ | ಕೋಟ್ಯಂತರ ರೂ. ಹಣ ವರ್ಗಾವಣೆ, ಹವಾಲಾ ನಂಟು ತನಿಖೆಯಿಂದ ಬಹಿರಂಗ
ಬೆಂಗಳೂರು : ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ ವರ್ಗಾವಣೆಯಾಗಿದ್ದ ಕೋಟ್ಯಂತರ ರೂ. ಹಣ ಹವಾಲಾ ಮಾರ್ಗದ ಮೂಲಕ ಹೈದರಾಬಾದ್ ಗುಂಪೊಂದಕ್ಕೆ ಸೇರಿರುವ ಬಗ್ಗೆ ಎಸ್‍ಐಟಿ ಅಧಿಕಾರಿಗಳ ತನಿಖೆಯಲ್ಲಿ ಗೊತ್ತಾಗಿರುವುದಾಗಿ ವರದಿಯಾಗಿದೆ.
ಅಕ್ರಮ ಹಣ ವರ್ಗಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಪ್ರಕರಣದಡಿ ಬೆಂಗಳೂರಿನ ತೇಜ ತಮ್ಮಯ್ಯ, ಹೈದರಾಬಾದ್‍ನ ಚಂದ್ರಮೋಹನ್, ಶ್ರೀನಿವಾಸ್, ಜಗದೀಶ್ ಎಂಬುವರ ವಿಚಾರಣೆ ವೇಳೆ ನಿಗಮದ ಹಣ ಹವಾಲಾ ಮೂಲಕ ವರ್ಗಾವಣೆಯಾಗಿರುವ ಬಗ್ಗೆ ಬಾಯ್ಬಿಟ್ಟಿರುವುದಾಗಿ ಎಸ್‍ಐಟಿ ಮೂಲಗಳು ತಿಳಿಸಿವೆ.
ಈ ದಂಧೆಯ ಪ್ರಮುಖ ಆರೋಪಿ ಕಾರ್ತೀ ಶ್ರೀನಿವಾಸ್ ಎಂಬಾತನಿಗಾಗಿ ಎಸ್‍ಐಟಿ ಅಧಿಕಾರಿಗಳು ಶೋಧ ನಡೆಸುತ್ತಿರುವುದಾಗಿ ತಿಳಿದುಬಂದಿದೆ. ಹವಾಲಾ ದಂಧೆ ಮಾಹಿತಿ ಆಧರಿಸಿ ಅಕ್ರಮ ಹಣ ವರ್ಗವಣೆ ಪ್ರಕರಣದ ಕುರಿತು ಜಾರಿ ನಿರ್ದೇಶನಾಲಯ(ಈ.ಡಿ.) ಅಧಿಕಾರಿಗಳಿಗೆ ಎಸ್‍ಐಟಿ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿದ್ದು, ಅದರಂತೆ ಪ್ರತ್ಯೇಕವಾಗಿ ಈ.ಡಿ. ಅಧಿಕಾರಿಗಳು ಈ ಪ್ರಕರಣದ ಕುರಿತಾಗಿ ತನಿಖೆ ಆರಂಭಿಸಿರುವುದಾಗಿ ಮೂಲಗಳು ತಿಳಿಸಿವೆ.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣ ಮದ್ಯದಂಗಡಿ, ಚಿನ್ನದ ಅಂಗಡಿ ಖಾತೆಗಳಿಗೆ ವರ್ಗಾವಣೆಯಾಗಿತ್ತು. ಬಳಿಕ ಈ ಹಣವನ್ನು ಹೈದರಾಬಾದ್ ಗುಂಪೊಂದು ಮದ್ಯದಂಗಡಿ ಖಾತೆಗಳಿಂದ ವಿತ್ ಡ್ರಾ ಮಾಡಿಕೊಂಡಿದೆ. ಮದ್ಯದಂಗಡಿ ಮತ್ತು ಚಿನ್ನದ ಅಂಗಡಿಗಳಿಗೆ ಬರೊಬ್ಬರಿ 10 ಕೋಟಿ ರೂ. ವರ್ಗಾವಣೆಯಾಗಿದೆ. ವರ್ಗಾವಣೆಯಾಗಿದ್ದ ಹಣವನ್ನು ಎಸ್‍ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. 193 ಬ್ಯಾಂಕ್ ಖಾತೆಗಳಿಂದ 10 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದ್ದರು. ಈ ಮೂಲಕ ಇದುವರೆಗೆ ಒಟ್ಟು 28 ಕೋಟಿ ರೂ. ಹಣ ವಶಕ್ಕೆ ಪಡೆಯಲಾಗಿದೆ ಎಂದು ಎಸ್‍ಐಟಿ ಮೂಲಗಳು ತಿಳಿಸಿವೆ.