ಲೈಂಗಿಕ ಹಗರಣ ಪ್ರಕರಣ | ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಎಫ್‍ಐಆರ್, ಬಂಧನ ಸಾಧ್ಯತೆ
ಬೆಂಗಳೂರು : ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣ ಪ್ರಕರಣ ಸಂಬಂಧ ಅಶ್ಲೀಲ ವಿಡಿಯೊ ಪೆನ್‍ಡ್ರೈವ್ ಹಂಚಿಕೆ ಆರೋಪದಡಿ ಬಿಜೆಪಿಯ ಮಾಜಿ ಶಾಸಕ ಪ್ರೀತಂ ಗೌಡ ವಿರುದ್ಧ ಸಿಐಡಿ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ತನಿಖಾಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ.
ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ, ಕಿರಣ್,ಶರತ್ ಹಾಗೂ ಪ್ರೀತಂ ಗೌಡ ವಿರುದ್ಧ ಐಪಿಸಿ ಸೆಕ್ಷನ್ 354(ಎ)-ಲೈಂಗಿಕ ಕಿರುಕುಳ, 354 (ಡಿ) ಮಹಿಳೆಯ ನಿರಾಸಕ್ತಿಯ ಹೊರತಾಗಿಯೂ ಆಕೆಯನ್ನು ಹಿಂಬಾಲಿಸಿ ಕಿರುಕುಳ ನೀಡಿರುವುದು, 354 ಬಿ-ಮಹಿಳೆ ಮೇಲೆ ಆಕ್ರಮಣ ಹಾಗೂ ಮಾಹಿತಿ, 506-ಜೀವ ಬೆದರಿಕೆ ಹಾಗೂ ಐಟಿ ಕಾಯ್ದೆಯಡಿ ಮೊಕದ್ದಮೆ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಇಲ್ಲಿನ ಹೊಳೆನರಸೀಪುರ, ಕೆ.ಆರ್.ನಗರ, ಸಿಐಡಿ ಸೈಬರ್ ಠಾಣೆಯಲ್ಲಿ ಎರಡು ಪ್ರಕರಣಗಳು ಸೇರಿದಂತೆ ಒಟ್ಟು ನಾಲ್ಕು ಪ್ರಕರಣ ದಾಖಲಾಗಿದೆ. ನಾಲ್ಕನೇ ಪ್ರಕರಣದಲ್ಲಿ ಪ್ರಜ್ವಲ್ ಮೊದಲ ಆರೋಪಿಯಾದರೆ, ಪ್ರೀತಂ ಗೌಡ ನಾಲ್ಕನೇ ಆರೋಪಿಯಾಗಿದ್ದಾರೆ. ಹೀಗಾಗಿ, ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಸಹ ನೋಟಿಸ್ ಜಾರಿ ಮಾಡಿದೆ ಎಂದು ಮೂಲಗಳು ತಿಳಿಸಿವೆ.
ಇನ್ನೂ, ಎಸ್‌ಐಟಿ ನ್ಯಾಯಾಂಗ ಬಂಧನದಲ್ಲಿದ್ದ ಪ್ರಜ್ವಲ್ ರೇವಣ್ಣ ಅವರನ್ನು ಬಾಡಿ ವಾರೆಂಟ್ ಮೇರೆಗೆ ನಾಲ್ಕು ದಿನಗಳ ಕಾಲ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಜು.8ರವರೆಗೆ ನ್ಯಾಯಾಂಗ ಬಂಧನದಲ್ಲಿದ್ದ ಆರೋಪಿಯನ್ನು ಮಂಗಳವಾರ 42ನೆ ಎಸಿಎಂಎಂ ಕೋರ್ಟ್ ಆದೇಶದ ಮೇರೆಗೆ ಜೂ.29ರವರೆಗೆ ಎಸ್‌ಐಟಿ ವಶಕ್ಕೆ ತೆಗೆದುಕೊಂಡಿದೆ.