ಕಿದ್ವಾಯಿಯಲ್ಲಿ ಉಚಿತವಾಗಿ ಅಲೋಜಿಕ್ ಚಿಕಿತ್ಸೆ ಪಡೆಯಬಹುದು : ಸಚಿವ ಶರಣಪ್ರಕಾಶ್ ಪಾಟೀಲ್
ಬೆಂಗಳೂರು : ಪ್ರಧಾನಮಂತ್ರಿ ಪರಿಹಾರ ನಿಧಿ (ಪಿಎಂಆರ್‌ಎಫ್), ಮುಖ್ಯಮಂತ್ರಿಗಳ ಪರಿಹಾರ ನಿಧಿ (ಸಿಎಂಆರ್‌ಎಫ್), ಎಸ್‍ಸಿಪಿ/ ಟಿಎಸ್‍ಪಿ ಯೋಜನೆ ಮತ್ತು ಸಿಜಿಎಚ್‍ಎಸ್ ಯೋಜನೆಗಳ ಮೂಲಕ ಕಿದ್ವಾಯಿ ಬಿಎಂಟಿ ಕೇಂದ್ರದಲ್ಲಿ ಅಲೋಜಿಕ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆಯನ್ನು ಒದಗಿಸಲಾಗುತ್ತಿದೆ ಎಂದು ವೈದ್ಯಕೀಯ ಶಿಕ್ಷಣ, ಜೀವನೋಪಾಯ ಹಾಗೂ ಕೌಶಲ್ಯಭಿವೃದ್ದಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿರುವ ಕಿದ್ವಾಯಿ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿದ ಅವರು, ಕಿದ್ವಾಯಿ ಆಸ್ಪತ್ರೆಗೆ ದಾಖಲಾಗಿದ್ದ ಬಿಎಂಟಿ ರೋಗಿಗೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅವರು ರೋಗದಿಂದ ಸಂಪೂರ್ಣ ಗುಣಮುಖರಾಗಿದ್ದಾರೆ ಎಂದು ತಿಳಿಸಿದರು.
ಕಾಂಡಕೋಶ ಕಸಿಗಳು ಮುಖ್ಯವಾಗಿ ಎರಡು ವಿಧಗಳಿವೆ. ಆಟೋಲೋಗಸ್ (ರೋಗಿಯ ಸ್ವಂತ ಕಾಂಡಕೋಶಗಳನ್ನು ಬಳಸಲಾಗುತ್ತದೆ) ಮತ್ತು ಅಲೋಜೆನಿಕ್ (ಸ್ವೀಕೃತದಾರರಿಗೆ ನೀಡಿದ ದಾನಿ ಕಾಂಡಕೋಶಗಳು). ಸಾಮಾನ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲಿ ಆಟೋಲೋಗಸ್ ಕಸಿ ವೆಚ್ಚವು 7ರಿಂದ 15 ಲಕ್ಷ ರೂ.ಗಳವರೆಗೆ ಇರುತ್ತದೆ. ಮತ್ತು ಅಲೋಜೆನಿಕ್ ಬಿಎಂಟಿಗಳು ಸುಮಾರು 15-30 ಲಕ್ಷ ರೂ. ಇರುತ್ತದೆ. ರಾಜ್ಯದ ಕ್ಯಾನ್ಸರ್ ರೋಗಿಗಳಿಗೆ ಅನುಕೂಲವಾಗಲು ಹಾಗೂ ಬಡ ರೋಗಿಗಳಿಗೆ ಅಸ್ಥಿಮಜ್ಜೆ ಕಸಿ ಸೇವೆ ಲಭ್ಯವಾಗಿದ್ದು, ರೋಗಿಗಳಿಗೆ ಕೈಗೆಟುಕುವ ದರದಲ್ಲಿ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಹಲವು ಪ್ರಖ್ಯಾತಿಗೆ ಪಾತ್ರವಾಗಿರುವ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯು ಮತ್ತೊಂದು ಸಾಧನೆ ಮಾಡಿದೆ. 14-ವರ್ಷದ ರೋಗಿಯೊಬ್ಬರಿಗೆ ಮೊದಲ ಪೀಡಿಯಾಟ್ರಿಕ್ ಮ್ಯಾಚಡ್ ಸಿಬ್ಲಿಂಗ್ ಡೋನರ್ ಅಲೋಜೆನಿಕ್ ಬೋನ್ ಮ್ಯಾರೊ ಟ್ರಾನ್ಸ್ ಪ್ಲಾಂಟ್ (ಬಿಎಂಟಿ) (ಅಸ್ತಿಮಜ್ಜೆ ಕಸಿ) ಚಿಕಿತ್ಸೆಯನ್ನು ಯಶಸ್ವಿಗೊಳಿಸುವ ಮೂಲಕ ರಾಜ್ಯ ಕಿದ್ವಾಯಿ ಆಸ್ಪತ್ರೆ ಹೊಸ ಮೈಲಿಗಲ್ಲು ಸೃಷ್ಟಿಸಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆ ನಿರ್ದೇಶಕ ಡಾ.ವಿ.ಲೋಕೇಶ್, ವೈದ್ಯಕೀಯ ಅಧೀಕ್ಷಕ ಡಾ.ನವೀನ್.ಟಿ ಮತ್ತು ಡಾ.ಪ್ರಭಾ ಶೇಷಾಚಾರ್, ಆರ್‌ಎಂಒ ಮತ್ತಿತರರು ಉಪಸ್ಥಿತರಿದ್ದರು.