ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದ ನಿರ್ಲಕ್ಷ್ಯದಿಂದ ಖಾಸಗಿ ಹಜ್ ಟೂರ್ ಆಪರೇಟರ್‌ಗಳಿಗೆ ಸಮಸ್ಯೆ: ಶೌಕತ್ ಅಲಿ ಸುಲ್ತಾನ್

ಬೆಂಗಳೂರು : ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆಯ ಸಿದ್ಧತೆಗಳನ್ನು ಖಾಸಗಿ ಹಜ್ ಟೂರ್ ಆಪರೇಟರ್‌ಗಳು ಆರಂಭಿಸಿದ್ದಾರೆ. ಆದರೆ, ಸೌದಿ ಅರೇಬಿಯಾ ಸರಕಾರದ ಕಟ್ಟುನಿಟ್ಟಿನ ನಿಯಮಗಳು, ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯ ಮತ್ತು ಇತರ ಅಧಿಕಾರಿಗಳ ನಿರ್ಧಾರಗಳಿಂದ ಖಾಸಗಿ ಹಜ್ ಟೂರ್ ಆಪರೇಟರ್‌ಗಳು ಸಮಸ್ಯೆಗೆ ಸಿಲುಕುವಂತಾಗಿದೆ ಎಂದು ರಾಜ್ಯ ಹಜ್ ಸಂಘಟಕರ ಸಂಘದ ಅಧ್ಯಕ್ಷ ಶೌಕತ್ ಅಲಿ ಸುಲ್ತಾನ್ ತಿಳಿಸಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಜ್‌ಗೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ನುಸುಕ್ ಆ್ಯಪ್‌ಗೆ ಲಿಂಕ್ ಮಾಡಲಾಗಿದೆ. ಕರ್ನಾಟಕದಲ್ಲಿರುವ ಎಲ್ಲ ಅನುಮೋದಿತ ಹಜ್ ಟೂರ್ ಆಪರೇಟರ್‌ಗಳಿಗೆ ಮಾ.15 ರವರೆಗೆ ಮಕ್ಕಾ ಮತ್ತು ಮದೀನಾದಲ್ಲಿನ ಹೊಟೇಲ್‌ಗಳು ಮತ್ತು ಕಟ್ಟಡಗಳು, ಮಿನಾ ಮತ್ತು ಅರಾಫತ್‌ನಲ್ಲಿ ವಸತಿ, ಸಾರಿಗೆ ಮತ್ತು ಇತರ ವೆಚ್ಚಗಳನ್ನು ಪಾವತಿ ಮಾಡುವಂತೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.
ಇಷ್ಟೊಂದು ಆತುರವಾಗಿ ಹಜ್ ಯಾತ್ರಿಕರಿಂದ ಮುಂಗಡ ಹಣವನ್ನು ತೆಗೆದುಕೊಳ್ಳಲು ಮುಂದಾಗಿರುವುದು ಇದೇ ಮೊದಲು. ಇದರಿಂದಾಗಿ, ಖಾಸಗಿ ಟೂರ್ ಆಪರೇಟರ್‌ಗಳು ನಿಗದಿತ ಕೋಟದಂತೆ ಯಾತ್ರಿಗಳನ್ನು ಆಯ್ಕೆ ಮಾಡಲು ಆಗುವುದಿಲ್ಲ. ಪ್ರತೀ ವರ್ಷ ಹಜ್ ಯಾತ್ರೆಯ ವೆಚ್ಚವು ಹೆಚ್ಚಳವಾಗುತ್ತಿದೆ. ಸೌದಿ ಅರೇಬಿಯಾದಲ್ಲಿ ಹೊಟೇಲ್‌ಗಳಿಗೆ ಶೇ.20ರಷ್ಟು ತೆರಿಗೆ ಮತ್ತು ಇತರ ಸೌಲಭ್ಯಗಳಿಗೆ ಶೇ.15ರಷ್ಟು ವ್ಯಾಟ್ ವಿಧಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕರ್ನಾಟಕ ರಾಜ್ಯ ಹಜ್ ಸಂಘಟಕರ ಸಂಘದ ಮುಖ್ಯಸ್ಥ ಇಕ್ಬಾಲ್ ಅಹ್ಮದ್ ಸಿದ್ದೀಕಿ ಮಾತನಾಡಿ, ಕೇಂದ್ರ ಅಲ್ಪಸಂಖ್ಯಾತರ ಸಚಿವಾಲಯ, ವಿದೇಶಾಂಗ ಸಚಿವಾಲಯ, ಜಿದ್ದಾ ಕಾನ್ಸುಲ್ ಜನರಲ್ ಮತ್ತು ಸೌದಿ ಅರೇಬಿಯಾದ ಹಜ್ ಸಚಿವಾಲಯದ ನಡುವಿನ ಸಮನ್ವಯ ಕೊರತೆಯು ಹಲವಾರು ಸಮಸ್ಯೆಗಳಿಗೆ ಕಾರಣವಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಶಫಿ ಅಹ್ಮದ್ ಮತ್ತಿತರಿದ್ದರು.