ನೇಕಾರರಿಗೆ ಉದ್ಯೋಗ ಒದಗಿಸಲು ಕ್ರಮ : ಶಿವಾನಂದ ಪಾಟೀಲ್

ಬೆಂಗಳೂರು : ನೇಕಾರರಿಗೆ ಉದ್ಯೋಗ ನೀಡಲು ಸರಕಾರ ಹಲವು ಕ್ರಮಗಳನ್ನು ಕೈಗೊಂಡಿದ್ದು, ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ್‍ಗಳು, ಆರೋಗ್ಯ ಕೇಂದ್ರಗಳಿಗೆ ಬೆಡ್‍ಶಿಟ್ ಮತ್ತು ಟವೆಲ್‍ಗಳನ್ನು ಪೂರೈಕೆ ಮಾಡಲು ಬೇಡಿಕೆ ಪಡೆಯಲಾಗುತ್ತಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಗುರುವಾರ ಬಿಜೆಪಿ ಸದಸ್ಯ ಸಿದ್ದು ಸವದಿ ಗಮನ ಸೆಳೆಯುವ ಸೂಚನೆ ನಿಯಮ 73ರ ವಿಷಯಕ್ಕೆ ಉತ್ತರಿಸಿದ ಅವರು, ನೇಕಾರರಿಗೆ ನೆರವಾಗಲು ಸರಕಾರ ಹಲವು ಯೋಜನೆಗಳನ್ನು ರೂಪಿಸಿದೆ. 2025-26ನೇ ಶೈಕ್ಷಣಿಕ ವರ್ಷದಲ್ಲಿ ಶಿಕ್ಷಣ ಇಲಾಖೆಯ ಸಮವಸ್ತ್ರಕ್ಕೆ ಅಗತ್ಯವಾದ 21.15 ಲಕ್ಷ ಮೀಟರ್ ಬಟ್ಟೆಯನ್ನು ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮದ 3,567 ನೋಂದಾಯಿತ ನೇಕಾರರಿಂದ ತಯಾರಿಸಿ ಪೂರೈಕೆ ಮಾಡಲಾಗುವುದು ಎಂದು ತಿಳಿಸಿದರು.
ವಿದ್ಯಾವಿಕಾಸ ಸಮವಸ್ತ್ರ ಸರಬರಾಜಿಗೆ ಅಗತ್ಯ ಬಟ್ಟೆಯ ಪ್ರಮಾಣಕ್ಕೆ ಅನುಗುಣವಾಗಿ ಅಲ್ಲಿನ ಉಪಕೇಂದ್ರಗಳಲ್ಲಿ ಎಲ್ಲ ನೇಕಾರರಿಗೆ ನಿರಂತರ ನೂಲು ಸರಬರಾಜು ಮಾಡುತ್ತಿದ್ದು, ನೇಕಾರರು ನೇಯುವ ಬಟ್ಟೆಗೆ ನಿಗದಿತ ಪರಿವರ್ತನಾ ಶುಲ್ಕ ಪಾವತಿ ಮಾಡಲಾಗುವುದು. ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವು ಬಾಗಲಕೋಟ ಜಿಲ್ಲೆಯ ತೇರದಾಳ ವ್ಯಾಪ್ತಿಯ ರಬಕವಿ, ಬನಹಟ್ಟಿ, ತೇರದಾಳ, ಚಿಮ್ಮಡ, ಕೆಂಗೇರಿಮಡಿ, ಮಹಾಲಿಂಗಪುರ, ಹೊಸೂರು ಮತ್ತು ನಾವಲಗಿಯಲ್ಲಿ ಉಪಕೇಂದ್ರಗಳನ್ನು ಹೊಂದಿದ್ದು, ಈ ಕೇಂದ್ರಗಳಲ್ಲಿ ವಿದ್ಯಾ ವಿಕಾಸ ಯೋಜನೆಯ ಸಮವಸ್ತ್ರ ಬಟ್ಟೆ ತಯಾರಿಸಲಾಗುತ್ತಿದೆ ಎಂದರು.