ಬಿಜೆಪಿ, ಎನ್ಡಿಎ ಸರಕಾರ ಅಲ್ಪಸಂಖ್ಯಾತ ವಿರೋಧಿ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಬಿಜೆಪಿ ಹಾಗೂ ಎನ್ಡಿಎ ಸರಕಾರ ದೇಶದ ಅಲ್ಪಸಂಖ್ಯಾತರ ವಿರೋಧಿಗಳಾಗಿವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಎಸ್.ನಿಜಲಿಂಗಪ್ಪ ಅವರ ಪುಣ್ಯತಿಥಿ ಅಂಗವಾಗಿ ಗುರುವಾರ ವಿಧಾನಸೌಧ ಆವರಣದಲ್ಲಿ ಅವರ ಪ್ರತಿಮೆಗೆ ನಮನ ಸಲ್ಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ವಕ್ಫ್ ವಿರೋಧಿ ತಿದ್ದುಪಡಿಗೆ ಕೇಂದ್ರ ಸರಕಾರ ಮುಂದಾಗಿದ್ದು, ಇದರಿಂದ ಬಿಜೆಪಿ ಹಾಗೂ ಎನ್ಡಿಎ ಸರಕಾರ ದೇಶದ ಅಲ್ಪಸಂಖ್ಯಾತರ ವಿರೋಧಿಗಳೆಂದು ಬಹಿರಂಗೊಂಡಿದೆ. ಅಷ್ಟೇ ಅಲ್ಲದೆ, ಅವರು ಜಾತ್ಯಾತೀತ, ಸಾಮಾಜಿಕ ನ್ಯಾಯದ ಸಿದ್ದಾಂತಗಳನ್ನು ಬೆಂಬಲಿಸದ ಕೋಮುವಾದಿ ಪಕ್ಷವಾಗಿದ್ದಾರೆ ಎಂದು ಟೀಕಿಸಿದರು.
ಇನ್ನೂ, ಕರ್ನಾಟಕದ ಅಭಿವೃದ್ದಿ ಪಥಕ್ಕೆ ಅಡಿಗಲ್ಲು ಹಾಕಿದ ನಿಜಲಿಂಗಪ್ಪನವರ ತತ್ವಾದರ್ಶಗಳು ಸ್ಪೂರ್ತಿದಾಯಕ. ಕನ್ನಡ ನಾಡಿನ ಅಭಿವೃದ್ಧಿಗೆ ಕೊಡುಗೆ ನೀಡಿದ ಅವರು ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದಾರೆ. ಅವರು ಈ ದೇಶ ಕಂಡ ಪ್ರಾಮಾಣಿಕ ರಾಜಕಾರಣಿ. ಮೌಲ್ಯಯುತ ರಾಜಕೀಯ ಜೀವನವನ್ನು ನಡೆಸಿಕೊಂಡು ಬಂದವರಾಗಿದ್ದು, ನೀರಾವರಿ ಕ್ಷೇತ್ರದ ಅಭಿವೃದ್ಧಿ ಸೇರಿದಂತೆ ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ್ದಾರೆ ಎಂದು ಅವರು ಸ್ಮರಿಸಿದರು.