ಸಿದ್ದರಾಮಯ್ಯರ ವಿರುದ್ಧ ಪುರೋಹಿತಶಾಹಿಗಳ ಷಡ್ಯಂತ್ರ : ಶ್ರೀಬಸವನಾಗಿದೇವ ಸ್ವಾಮಿ
ಸಿದ್ದರಾಮಯ್ಯ
ಬೆಂಗಳೂರು : ಶೋಷಿತ ಸಮುದಾಯಕ್ಕೆ ಸೇರಿದ ಸಿದ್ದರಾಮಯ್ಯ ಎರಡನೆ ಬಾರಿಗೆ ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲಾಗದೆ ಬಿಜೆಪಿ-ಜೆಡಿಎಸ್ ನಾಯಕರು ಷಡ್ಯಂತ್ರ ರಾಜಕಾರಣ ನಡೆಸುತ್ತಿದ್ದಾರೆ. ಸಿದ್ದರಾಮಯ್ಯ ವಿರುದ್ಧ ನಡೆಸುತ್ತಿರುವ ಪುರೋಹಿತಶಾಹಿಗಳ ಕುಟಿಲ ಷಡ್ಯಂತ್ರವನ್ನು ವಿಫಲಗೊಳಿಸಬೇಕು ಎಂದು ಛಲವಾದಿ ಮಠದ ಶ್ರೀ ಬಸವನಾಗಿದೇವ ಶರಣ ಕರೆ ನೀಡಿದ್ದಾರೆ.
ಗುರುವಾರ ನಗರದ ಪ್ರೆಸ್ಕ್ಲಬ್ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಾವಿರಾರು ವರ್ಷಗಳಿಂದ ಶೋಷಿತ ಸಮುದಾಯಗಳನ್ನು ದೇವರು, ಧರ್ಮ ಮತ್ತು ಸಂಪ್ರದಾಯಗಳ ಹೆಸರಿನಲ್ಲಿ ತುಳಿಯುತ್ತಾ ಬಂದಿರುವ ಬ್ರಾಹ್ಮಣ್ಯದ ಮನಸ್ಸುಗಳಿಗೆ ಸಿದ್ದರಾಮಯ್ಯರ ನಾಯಕತ್ವವನ್ನು ಸಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದಲೆ ಬಿಜೆಪಿ-ಜೆಡಿಎಸ್ ನಾಯಕರು ರಾಜಕೀಯ ಬಿಕ್ಕಟ್ಟಿನ ಅತಂತ್ರ ಸ್ಥಿತಿ ನಿರ್ಮಾಣ ಮಾಡಲು ಹತಾಶ ಪ್ರಯತ್ನಗಳು ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಇದುವರೆಗೂ ಆಡಳಿತ ನಡೆಸಿದ ಮೂರೂ ರಾಜಕೀಯ ಪಕ್ಷಗಳೂ ಪರಿಶಿಷ್ಟರಿಗೆ ಸಿಎಂ ಸ್ಥಾನ ನೀಡಲು ನಿರಾಕರಿಸುತ್ತಲೇ ಬಂದಿವೆ ಎಂಬುದು ಕಟುಸತ್ಯ. ಸುಳ್ಳು ಆರೋಪಗಳನ್ನು ಹೊರಿಸಿ, ಕುಟಿಲ ತಂತ್ರಗಾರಿಕೆಗಳ ಮೂಲಕ ಶೋಷಿತ ಸಮುದಾಯಕ್ಕೆ ಸೇರಿದ ಜನ ನಾಯಕ ಸಿದ್ದರಾಮಯ್ಯರನ್ನು ಅಧಿಕಾರದಿಂದ ಕೆಳಗಿಳಿಸಿ, ಮೇಲ್ಜಾತಿಗಳು ಹೇಗಾದರೂ ಅಧಿಕಾರಕ್ಕೆ ಏರಲೇಬೇಕೆಂಬ ದುಷ್ಟ ಬುದ್ದಿ ಇರುವಂತಹದ್ದು ನಾಡಿಗೆ ಒಳಿತು ಮಾಡುವುದಿಲ್ಲ ಎಂದು ಬಸವನಾಗಿದೇವ ಸ್ವಾಮಿ ಅಭಿಪ್ರಾಯಪಟ್ಟರು.
ಜಾತಿ ತಾರತಮ್ಯದ ವಿರುದ್ಧ ತನ್ನ ಮಾತು ಮತ್ತು ಆಡಳಿತ ನೀತಿ ಮೂಲಕ ಸರಕಾರ ನಡೆಸುತ್ತಿರುವ ಸಿದ್ದರಾಮಯ್ಯರನ್ನು ಭ್ರಷ್ಟ ಎಂದು ಬಿಂಬಿಸಿ, ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅವಮಾನಿಸುವ ಪುರೋಹಿತಶಾಹಿಗಳ ಕುಟಿಲ ಷಡ್ಯಂತ್ರದಲ್ಲಿ ಅಧಿಕಾರ ರಾಜಕಾರಣದ ಅಹಂಕಾರ. ಸಿದ್ದರಾಮಯ್ಯರ ಪತ್ನಿ ಹೆಸರನ್ನು ಎಳೆದು ತಂದು, ಅವರನ್ನೂ ಭ್ರಷ್ಟರೆಂದು ಬಿಂಬಿಸಲು ನಡೆದಿರುವ ಹತಾಶ ಪ್ರಯತ್ನ ಖಂಡಿಸುತ್ತೇವೆ ಎಂದು ಅವರು ಹೇಳಿದರು.
ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದ ಭೋವಿ ನಿಗಮದ ಹಗರಣ ಸೇರಿದಂತೆ ಇನ್ನಿತರೆ ನಿಗಮಗಳಲ್ಲಿ ನಡೆದಿರುವ ಎಲ್ಲ ಹಗರಣಗಳಲ್ಲಿ ಶಾಮೀಲಾಗಿರುವ ರಾಜಕಾರಣಿಗಳು, ಅಧಿಕಾರಿಗಳು, ಗುತ್ತಿಗೆದಾರರು ಸೇರಿದಂತೆ ಎಲ್ಲ ಭ್ರಷ್ಟರನ್ನು ಕಾನೂನಿನ ಕೈಗೆ ಒಪ್ಪಿಸ ಬೇಕೆಂದು ಬಸವನಾಗಿದೇವ ಶರಣ ಆಗ್ರಹಿಸಿದರು. ಅಹಿಂದಾ ಪದಾಧಿಕಾರಿ ಶಾಂತಕುಮಾರ್, ದಸಂಸ ಯುವ ಘಟಕದ ಮಹೇಶ್ ಹಾಗೂ ಲಕ್ಷ್ಮಿ ಉಪಸ್ಥಿತರಿದ್ದರು.