ಗುಣಮಟ್ಟದ ಆರೋಗ್ಯ ಸೌಲಭ್ಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವ ವ್ಯವಸ್ಥೆ : ಸಿದ್ದರಾಮಯ್ಯ
ಬೆಂಗಳೂರು : ಸಮಾಜದಲ್ಲಿ ಬಡವರು ಮತ್ತು ಕೆಳಮಧ್ಯಮ ವರ್ಗದವರು ಸರಕಾರಿ ಆಸ್ಪತ್ರೆಗಳ ಮೇಲೆಯೇ ಅವಲಂಬಿಸಿದ್ದು, ಖಾಸಗಿ ಆಸ್ಪತ್ರೆಯಲ್ಲಿ ದೊರೆಯುವಂತಹ ಗುಣಮಟ್ಟದ ಆರೋಗ್ಯ ಸೌಲಭ್ಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ದೊರೆಯುವ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ಇಲ್ಲಿನ ಶಿವಾಜಿನಗರದ ಚರಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ವ್ಯವಸ್ಥೆಯನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, 2016-17ರಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮೈಸೂರು, ಗುಲಬರ್ಗಾ, ಬೆಳಗಾವಿ ಹಾಗೂ ಇಲ್ಲಿನ ಶಿವಾಜಿನಗರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಯೋಜನೆಯನ್ನು ಕೈಗೊಳ್ಳಲಾಗಿತ್ತು. ಇದನ್ನು ಸಕಾರಗೊಳಿಸಲಾಗುತ್ತಿದೆ ಎಂದರು.
ಓಟಿ ಸೇರಿದಂತೆ ಹಲವು ಅತ್ಯಾಧುನಿಕ ಸೌಲಭ್ಯಗಳನ್ನು ಆಸ್ಪತ್ರೆಯಲ್ಲಿ ಒದಗಿಸಲಾಗಿದೆ. ಬಡವರಿಗೆ ಸಹಾಯ ಒದಗಿಸುವುದು ನಮ್ಮ ಸರಕಾರದ ಬದ್ಧತೆ. ಯಾವುದೇ ಜಾತಿ, ಧರ್ಮದ ಬೇಧವಿಲ್ಲದೆ, ಎಲ್ಲ ಬಡವರಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ಶಕ್ತಿ ತುಂಬಿ ಮುಖ್ಯವಾಹಿನಿಗಿ ಬರುವಂತಾಗಲು ಗ್ಯಾರಂಟಿ ಯೋಜನೆಗಳನ್ನು ಸರಕಾರ ಜಾರಿಗೊಳಿಸಿದ್ದು, 52,009 ಕೋಟಿ ರೂ.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಮೀಸಲಿಡಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣದ ವೇಳೆ ಅಝಾನ್ ಪ್ರಾರಂಭವಾಯಿತು. ಅಝಾನ್ ಧ್ವನಿ ಕೇಳಿಸುತ್ತಿದ್ದಂತೆ ಅವರು ತಮ್ಮ ಭಾಷಣವನ್ನು ನಿಲ್ಲಿಸಿ ಮೌನವಾಗಿ ನಿಂತರು. ಅಝಾನ್ ಮುಗಿದ ಬಳಿಕ ತಮ್ಮ ಭಾಷಣವನ್ನು ಮುಂದುವರೆಸಿದರು.
ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮಾತನಾಡಿ, ಐದು ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ ಆರೋಗ್ಯ ಮತ್ತು ಶಿಕ್ಷಣದ ಗ್ಯಾರಂಟಿಯನ್ನು ಕಾಂಗ್ರೆಸ್ ಸರಕಾರ ನೀಡುತ್ತಿದೆ. ಗ್ಯಾರಂಟಿಗಳನ್ನು ನೀಡಿದ್ದು ಚುನಾವಣೆಗಲ್ಲ. ಜನರ ಬದುಕಿನಲ್ಲಿ ಬದಲಾವಣೆ ತರಲು. ಕರ್ನಾಟಕವನ್ನು ಹಸಿವು, ಬಡತನ ಮತ್ತು ಅಸಮಾನತೆ ಮುಕ್ತ ರಾಜ್ಯ ಮಾಡಬೇಕೆಂಬುದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರದ ಗುರಿ ಎಂದು ಹೇಳಿದರು.
ನಮ್ಮ ರಾಜ್ಯದಲ್ಲಿ 70ಕ್ಕೂ ಹೆಚ್ಚು ವೈದ್ಯಕೀಯ ಕಾಲೇಜುಗಳಿವೆ. ಸುಮಾರು 1 ಸಾವಿರಕ್ಕೂ ಹೆಚ್ಚು ಪ್ಯಾರಾ ಮೆಡಿಕಲ್ ಕಾಲೇಜುಗಳಿವೆ. ದೇಶದ ಯಾವ ರಾಜ್ಯಗಳಲ್ಲೂ ಇಲ್ಲದ ವೈದ್ಯಕೀಯ ಶಿಕ್ಷಣ ಸೌಲಭ್ಯ ನಮ್ಮಲ್ಲಿದೆ. ವಿದೇಶಗಳಿಂದ ಜನರು ಬಂದು ನಮ್ಮ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕರ್ನಾಟಕ ಹೆಲ್ತ್ ಟೂರಿಸಂಗೆ ಹೆಸರಾಗುತ್ತಿದೆ ಎಂದು ಅವರು ತಿಳಿಸಿದರು.
ಶಿವಾಜಿನಗರ ಕ್ಷೇತ್ರ ರಿಝ್ವಾನ್ ಆರ್ಶದ್ ನೇತೃತ್ವದಲ್ಲಿ ಮಿಕ್ಕ ಯಾವ ಕ್ಷೇತ್ರಗಳಿಗೂ ಕಡಿಮೆ ಇಲ್ಲದಂತೆ ಅಭಿವೃದ್ದಿ ಹೊಂದುತ್ತಿದೆ. ನೀವು ನಮ್ಮ ಕ್ಷೇತ್ರ ಹಿಂದುಳಿದಿದೆ ಎಂದು ಕೊರಗುವುದನ್ನು ಅವರು ತಪ್ಪಿಸಿದ್ದಾರೆ. ಗ್ರೇಟರ್ ಬೆಂಗಳೂರು ವಿಧೇಯಕ ಪರಿಶೀಲನೆ ಮತ್ತು ವರದಿಗಾಗಿ ವಿಧಾನ ಮಂಡಲ ಜಂಟಿ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿ ರಿಝ್ವಾನ್ರನ್ನು ನೇಮಕ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿಗಳು ಹೇಳಿದರು.
ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮದ್, ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ಮತ್ತಿತರರು ಇದ್ದರು.
ಬಿಜೆಪಿಗೆ ಸುಳ್ಳು ಹೇಳುವುದೇ ಕಾಯಕ
ಬಿಜೆಪಿ ಬಡವರಪರ ಕೆಲಸ ಮಾಡುವುದನ್ನು ಸಹಿಸುವುದಿಲ್ಲ. ಬಡವರು ಶಕ್ತಿವಂತರಾದರೆ, ಅವರ ಮೇಲೆ ಶೋಷಣೆ ಮಾಡಲು ಸಾಧ್ಯವಾಗುವುದಿಲ್ಲ. ಆದುದರಿಂದ ಬಿಜೆಪಿಯವರು ಸುಳ್ಳನ್ನು ಸತ್ಯ ಮಾಡಲು ಹೊರಟಿದ್ದಾರೆ. ಸಾಮಾಜಿಕ ನ್ಯಾಯವನ್ನು ಕೇಳಬಾರದೆಂಬುದೇ ಬಿಜೆಪಿಯಂತಹ ಪಟ್ಟಭದ್ರಹಿತಾಸಕ್ತಿಗಳ ಆಶಯವಾಗಿದೆ. ಜನರ ಆಶೀರ್ವಾದವಿರುವರೆಗೆ ಸಿದ್ದರಾಮಯ್ಯನನ್ನು ಅಲುಗಾಡಿಸಲು ಸಾಧ್ಯವಿಲ್ಲ.
- ಸಿದ್ದರಾಮಯ್ಯ, ಮುಖ್ಯಮಂತ್ರಿ