ವಿಕಲಚೇತನರ ಶ್ರೇಯೋಭಿವೃದ್ಧಿಗಾಗಿ ಪೂರಕ ಅಂದಾಜಿನಲ್ಲಿ 44 ಕೋಟಿ ರೂ. ಮಂಜೂರು : ಸಿದ್ದರಾಮಯ್ಯ ಭರವಸೆ
"ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ, ಅವರು ಸಮಾಜದ ಆಸ್ತಿ"
ಬೆಂಗಳೂರು: ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರ ಬದ್ಧವಾಗಿದ್ದು, ಅವರ ಶ್ರೇಯೋಭಿವೃದ್ಧಿಗಾಗಿ ಪ್ರಸಕ್ತ ಸಾಲಿನ ಪೂರಕ ಅಂದಾಜಿನಲ್ಲಿ 44 ಕೋಟಿಗಳನ್ನು ಮಂಜೂರು ಮಾಡುವ ಭರವಸೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿದರು.
ಅವರು ಇಂದು ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖಾ ವತಿಯಿಂದ ಶ್ರೀ ಕಂಠೀರವ ಒಳಾoಗಣ ಕ್ರೀಡಾಂಗಣ ದಲ್ಲಿ ಆಯೋಜಿಸಲಾಗಿದ್ದ ವಿಶ್ವ ವಿಕಲಚೇತನರ ದಿನಾಚರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಕಾರ್ಯಕ್ರಮ ವನ್ನು ಉದ್ದೇಶಿಸಿ ಮಾತನಾಡಿದರು.
ಸಂವಿಧಾನದಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ :
ರಾಜ್ಯದಲ್ಲಿ ಸುಮಾರು 15 ಲಕ್ಷ ವಿಕಲಚೇತನರಿದ್ದಾರೆ. ಇವರೆಲ್ಲರ ಆರೈಕೆ ಮಾಡಿ ವಿಶೇಷ ಸೌಲಭ್ಯಗಳನ್ನು ನೀಡುವುದು ಸರ್ಕಾರದ ಕರ್ತವ್ಯ. ಸಂವಿಧಾನದಲ್ಲಿ ಎಲ್ಲರೂ ಬದುಕುವ , ಉದ್ಯೋಗ ಪಡೆಯುವಂತಹ ಅವಕಾಶವನ್ನು ಕಲ್ಪಿಸಿದೆ. ವಿಕಲಚೇತನರು ಸಮಾಜಕ್ಕೆ ಹೊರೆಯಲ್ಲ. ಅವರು ಸಮಾಜದ ಆಸ್ತಿಯಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆ ಮಾಡುತ್ತಿದ್ದಾರೆ. ಇತ್ತೀಚೆಗೆ ನಡೆದ ಪಾರಾ ಒಲಂಪಿಕ್ಸ್ ನಲ್ಲಿ ಭಾರತದ ವಿಕಲಚೇತನ ಕ್ರೀಡಾಪಟುಗಳು ಹೆಚ್ಚಿನ ಪದಕಗಳನ್ನು ಪಡೆದಿರುವುದು ಹೆಮ್ಮೆಯ ವಿಚಾರ. ನಮ್ಮ ಸರ್ಕಾರ ಈ ಬಾರಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು “ಸಮಗ್ರ ಮತ್ತು ಸುಸ್ಥಿರ ಭವಿಷ್ಯಕ್ಕಾಗಿ ವಿಕಲಚೇತನ ವ್ಯಕ್ತಿಗಳಲ್ಲಿ ನಾಯಕತ್ವದ ಉತ್ತೇಜನ” ಎಂಬ ಘೋಷ ವಾಕ್ಯದೊಂದಿಗೆ ಆಚರಿಸುತ್ತಿದ್ದೇವೆ ಎಂದರು.
ವಿಕಲಚೇತನರ ಮಾಸಾಶನ ಹೆಚ್ಚಿಸಲು ಕೇಂದ್ರಕ್ಕೆ ಮನವಿ :
ಸಾಮಾಜಿಕ ಸಬಲೀಕರಣಕ್ಕಾಗಿ ಸಹ ಶೇಕಡಾ 40 ರಿಂದ 74 ವಿಕಲಚೇತನರಿಗೆ ರೂ. 800/- ಹಾಗೂ ಶೇ.75 ಮತ್ತು ಅದಕ್ಕಿಂತ ಹೆಚ್ಚಿನ ಅಂಗವೈಕಲ್ಯತೆವುಳ್ಳವರಿಗೆ ರೂ. 1400/- ಮತ್ತು ತೀವ್ರತರನಾದ ಮನೋವೈಕಲ್ಯತೆ ಇರುವ ವ್ಯಕ್ತಿಗಳಿಗೆ ರೂ. 2000/- ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ. ಕೇಂದ್ರ ಸರ್ಕಾರದಿಂದ ನೀಡಲಾಗುವ ವಿಕಲಚೇತನರ ಮಾಸಾಶನ ಮೊತ್ತವನ್ನು ಹೆಚ್ಚಿಸುವಂತೆ ಕೋರಿ ಸರ್ಕಾರ ಪತ್ರ ಬರೆಯಲು ಕ್ರಮ ಕೈಗೊಳ್ಳಲಿದೆ. ವಿಕಲಚೇತನರ ಸಬಲೀಕರಣಕ್ಕಾಗಿ ಸರ್ಕಾರ ಬದ್ಧವಾಗಿದೆ ಎಂದರು.