ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಭೇಟಿಯಾದ ಸಿದ್ದರಾಮಯ್ಯ

ಹೊಸದಿಲ್ಲಿ : ರಾಜ್ಯ ವಿಧಾನಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತುಕತೆ ನಡೆಸಿದರು.
ಶುಕ್ರವಾರ ಹೊಸದಿಲ್ಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ನಾಲ್ಕು ಸ್ಥಾನಗಳಿಗೆ 200ಕ್ಕೂ ಹೆಚ್ಚು ಆಕಾಂಕ್ಷಿಗಳಿರುವ ಬಗ್ಗೆ ಗಮನ ಸೆಳೆದರು. ಅಲ್ಲದೇ, ಪ್ರಾದೇಶಿಕತೆ, ಸಮುದಾಯ, ಪಕ್ಷದ ಕೆಲಸ ಸೇರಿದಂತೆ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಕುರಿತು ಉಭಯ ನಾಯಕರು ಸಮಾಲೋಚನೆ ನಡೆಸಿದರು.
ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯನ್ನು ಗುರುವಾರ ರಾತ್ರಿ ಭೇಟಿ ಮಾಡಿದ್ದ ಸಿದ್ದರಾಮಯ್ಯ, ವಿಧಾನಪರಿಷತ್‍ನ ನಾಲ್ಕು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಸಂಬಂಧ ಮಾತುಕತೆ ನಡೆಸಿದ್ದರು. ಅಲ್ಲದೇ. ಸಹಕಾರ ಸಚಿವ ಕೆ.ಎನ್.ರಾಜಣ್ಣ ಮಾಡಿರುವ ಹನಿಟ್ರ್ಯಾಪ್ ಆರೋಪದ ಕುರಿತು ರಾಹುಲ್ ಗಾಂಧಿಗೆ ಸಿದ್ದರಾಮಯ್ಯ ಮಾಹಿತಿ ಒದಗಿಸಿದರು ಎಂದು ತಿಳಿದು ಬಂದಿದೆ.