ಸಣ್ಣ ನೀರಾವರಿ ಇಲಾಖೆಯಲ್ಲಿ 1,468ಕೋಟಿ ರೂ.ವೆಚ್ಚ : ಸಿದ್ದರಾಮಯ್ಯ
‘ರಾಜ್ಯದಲ್ಲಿ 8.92 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ’

ಬೆಂಗಳೂರು : ಪ್ರಸಕ್ತ ವರ್ಷದಲ್ಲಿ ಸಣ್ಣ ನೀರಾವರಿ ಇಲಾಖೆಗೆ 1,577 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ 1,468 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬುಧವಾರ ಮುಖ್ಯಮಂತ್ರಿಗಳ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಸಣ್ಣ ನೀರಾವರಿ ಇಲಾಖೆಯ ಪ್ರಗತಿ ಪರೀಶಿಲನಾ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ವರ್ಷ ಸಣ್ಣ ನೀರಾವರಿ ಇಲಾಖೆಯ 9,449 ಹೆಕ್ಟೇರ್ ಹೊಸ ಅಚ್ಚುಕಟ್ಟು ಸೃಷ್ಟಿಸಲಾಗಿದೆ ಎಂದರು.
ರಾಜ್ಯದಲ್ಲಿ ಸಣ್ಣ ನೀರಾವರಿ ಇಲಾಖೆಯ 8.92 ಲಕ್ಷ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವಿದೆ. ಇದರಲ್ಲಿ 421 ಏತ ನೀರಾವರಿ ಯೋಜನೆಗಳ 94,315 ಹೆಕ್ಟೇರ್, 3,778 ಕೆರೆಗಳ 4,37,086 ಹೆಕ್ಟೇರ್ ಅಚ್ಚುಕಟ್ಟು ಸೇರಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.
ಪ್ರಸ್ತುತ ಹಣಕಾಸು ಸಾಲಿನಲ್ಲಿ ಒಟ್ಟು 1,112 ಕೋಟಿ ರೂ. ವೆಚ್ಚದಲ್ಲಿ 17 ಕಾಮಗಾರಿಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದ್ದು, ಕಾಮಗಾರಿಯನ್ನು ನಿಗದಿತ ಅವಧಿಯ ಒಳಗಾಗಿ ಪೂರ್ಣಗೊಳಿಸಬೇಕು. ಇದರಿಂದಾಗಿ 5,989 ಹೆಕ್ಟೇರ್ ಅಚ್ಚುಕಟ್ಟು ಸೃಜನೆಯಾಗಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಕೆಸಿ ವ್ಯಾಲಿ 1ನೇ ಹಂತದಲ್ಲಿ 1,342 ಕೋಟಿ ರೂ. ವೆಚ್ಚದಲ್ಲಿ 145 ಕೆರೆಗಳನ್ನು ತುಂಬಿಸುವ ಯೋಜನೆ ಪೂರ್ಣಗೊಳಿಸಲಾಗಿದೆ. ಯೋಜನೆಯಡಿ ಬಿಡಬ್ಲುಎಸ್‍ಎಸ್‍ಬಿ 440 ಎಂಎಲ್‍ಡಿ ಸಂಸ್ಕರಿಸಿದ ನೀರನ್ನು ಒದಗಿಸಬೇಕಾಗಿದ್ದು, ಪ್ರಸ್ತುತ 265 ಎಂಎಲ್‍ಡಿ ಒದಗಿಸುತ್ತಿದೆ. ಪೂರ್ಣ ಪ್ರಮಾಣದ ನೀರು ಪೂರೈಕೆಗೆ ಅಗತ್ಯವಿರುವ ಸಂಸ್ಕರಣಾ ಘಟಕಗಳ ನಿರ್ಮಾಣ ಕಾರ್ಯವನ್ನು ಈ ವರ್ಷದ ಅಂತ್ಯದ ಒಳಗಾಗಿ ಪೂರ್ಣಗೊಳಿಸಬೇಕು ಎಂದು ಸಿದ್ದರಾಮಯ್ಯ ಹೇಳಿದರು.
ಕೆಸಿ ವ್ಯಾಲಿ 2ನೇ ಹಂತದಲ್ಲಿ 446 ಕೋಟಿ ರೂ. ವೆಚ್ಚದಲ್ಲಿ 272 ಕೆರೆಗಳನ್ನು ತುಂಬಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಇದುವರೆಗೆ 32 ಕೆರೆಗಳನ್ನು ತುಂಬಿಸಲಾಗಿದೆ ಎಂದು ಸಿದ್ದರಾಮಯ್ಯ ತಿಳಿಸಿದರು.
ಪ್ರಸ್ತುತ ಒಟ್ಟು 1300 ಎಂಎಲ್‍ಡಿ ನೀರನ್ನು ಬೆಂಗಳೂರು ನಗರದಲ್ಲಿ ಸಂಸ್ಕರಿಸಲಾಗುತ್ತಿದೆ. ಹೊಸದಾಗಿ 583 ಎಂಎಲ್‍ಡಿ ನೀರು ಸಂಸ್ಕರಿಸಲು ಪೂರಕವಾಗಿ ಹೊಸ ಎಸ್‍ಟಿಪಿಗಳನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ ಎಂದು ಸಿಎಂ, ಈ ಪ್ರಸ್ತಾವನೆಗಳಿಗೆ ಅನುಮೋದನೆ ನೀಡಲು ಹಣಕಾಸು ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಕೆಸಿ ವ್ಯಾಲಿ, ಎಚ್‍ಎನ್ ವ್ಯಾಲಿ, ವೃಷಭಾವತಿ, ಹೊಸಕೋಟೆ, ಆನೆಕಲ್ ಯೋಜನೆಗಳಡಿ ಸಣ್ಣ ನೀರಾವರಿ ಇಲಾಖೆ ಕೆರೆಗಳನ್ನು ತುಂಬಿಸಲು ಅಗತ್ಯವಿರುವ ಸಂಪೂರ್ಣ ಪ್ರಮಾಣದ ನೀರನ್ನು ಒದಗಿಸಲು ಬಿಡಬ್ಲುಎಸ್‍ಎಸ್‍ಬಿ ಕ್ರಮ ಕೈಗೊಳ್ಳಬೇಕು. ಇದಕ್ಕೆ ಅಗತ್ಯವಿರುವ ಅನುದಾನ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದರು.