ಸರಕಾರಿ ಭೂಮಿ ಕಬಳಿಕೆ ಆರೋಪ | ಎಚ್‍ಡಿಕೆ ಕುಟುಂಬದ ವಿರುದ್ಧ ಎಸ್‍ಐಟಿ ರಚನೆಗೆ ಹಿರೇಮಠ್ ಸ್ವಾಗತ

ಬೆಂಗಳೂರು : ‘ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಕೇಳಿಬಂದಿರುವ ರಾಮನಗರದ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದ ಸರಕಾರಿ ಜಮೀನು ಕಬಳಿಕೆ ಆರೋಪ ಸಂಬಂಧ ತನಿಖೆ ನಡೆಸಲು ರಾಜ್ಯ ಸರಕಾರ ಎಸ್‍ಐಟಿ ರಚನೆ ಮಾಡಿರುವುದು ಸ್ವಾಗತಾರ್ಹ ಎಂದು ಸಾಮಾಜಿಕ ಹೋರಾಟಗಾರ ಎಸ್.ಆರ್.ಹಿರೇಮಠ್ ತಿಳಿಸಿದ್ದಾರೆ.
ಸೋಮವಾರ ಹುಬ್ಬಳ್ಳಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕರ್ನಾಟಕ ಭೂ ಕಂದಾಯ ಕಾಯ್ದೆ-1964 ಮತ್ತು ಕರ್ನಾಟಕ ಭೂ ಕಬಳಿಕೆ ನಿಷೇಧ ಕಾಯ್ದೆ-2011ರ ಅಡಿಯಲ್ಲಿ ಎಸ್‍ಐಟಿ ರಚನೆ ಮಾಡಲಾಗಿದ್ದು ಒಳ್ಳೆಯ ವಿಚಾರ. ಈ ಕುರಿತು ನಾನೇ ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ಕೇತಗಾನಹಳ್ಳಿಯಲ್ಲಿ ಸರ್ವೆ ನಂ. 8, 9, 10, 16, 17 ಮತ್ತು 79ರಲ್ಲಿನ ಜಮೀನು ಕಬಳಿಸಿದ್ದಾರೆ ಎಂದು ಆರೋಪಿಸಿ ಹೈಕೋರ್ಟ್‍ನಲ್ಲಿ ಪಿಎಎಲ್ ಸಲ್ಲಿಸಿದ್ದೆ ಎಂದು ತಿಳಿಸಿದರು.
ಈ ಅರ್ಜಿಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶ ಪಾಲಿಸಿಲ್ಲ ಎಂದು ರಾಜ್ಯ ಸರಕಾರದ ವಿರುದ್ಧ ನ್ಯಾಯಾಂಗ ನಿಂದನೆ ಅರ್ಜಿಯನ್ನೂ ಸಲ್ಲಿಸಿದ್ದು, ಆ ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್ ಸರಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಇದೀಗ ತನಿಖೆಗೆ ಎಸ್‍ಐಟಿ ರಚನೆ ಮಾಡಿದೆ ಎಂದು ಹೀರೆಮಠ್ ಹೇಳಿದರು.