ರಾಜ್ಯದಲ್ಲಿ ಆರು ಮಂದಿಗೆ ‘ಕಾಲರಾ ರೋಗ’ ಪತ್ತೆ : ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್
Photo:x/@Randeep_Dev
ಬೆಂಗಳೂರು: ಬಿಸಿಲಿನ ತಾಪಮಾನ ಏರಿಕೆಯಿಂದಾಗಿ ಕಾಲರಾ ರೋಗ ಹೆಚ್ಚುತ್ತಿದ್ದು, ರಾಜ್ಯದಲ್ಲಿ ಆರು ಮಂದಿಗೆ ಕಾಲರಾ ರೋಗ ಪತ್ತೆಯಾಗಿದೆ. ಅಲ್ಲದೆ, ಬಿಸಿಗಾಳಿಯ ಪರಿಣಾಮದಿಂದ ಓರ್ವ ಸಾವನಪ್ಪಿದ್ದಾನೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಡಿ.ರಂದೀಪ್ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿನ ಆರೋಗ್ಯ ಸೌಧದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು, ರಾಮನಗರ ಸೇರಿದಂತೆ ಆರು ಮಂದಿಯಲ್ಲಿ ಕಾಲರಾ ರೋಗ ಪತ್ತೆಯಾಗಿದೆ. ಬಿಸಿಗಾಳಿಯ ಪರಿಣಾಮವೇ ಕಾಲರಾ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಇಬ್ಬರಿಗೆ ಕಾಲರಾ ದೃಢಪಟ್ಟರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಮೂವರಿಗೆ ಕಾಲರಾ ಸೋಂಕು ತಗುಲಿರೋದು ಪರೀಕ್ಷೆಯಲ್ಲಿ ತಿಳಿದು ಬಂದಿದೆ. ರಾಮನಗರದಲ್ಲಿ ಒಬ್ಬ ವ್ಯಕ್ತಿ ಸೇರಿದಂತೆ 6 ಮಂದಿಗೆ ಕಾಲರಾ ದೃಢಪಟ್ಟಿದೆ. ಬಿಸಿಗಾಳಿ ಹೆಚ್ಚಾಗುತ್ತಿರೋ ಕಾರಣ ವ್ಯಕ್ತಿಯೊಬ್ಬರು ರಾಜ್ಯದಲ್ಲಿ ಸಾವನ್ನಪ್ಪಿದ್ದಾರೆ. ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ. ಆ ಬಗ್ಗೆ ಪರೀಕ್ಷೆ ನಡೆಸಲಾಗುತ್ತಿದೆ ಎಂದು ರಂದೀಪ್ ಹೇಳಿದರು.
ಮಲ್ಲೇಶ್ವರಂನ ನಿವಾಸಿಗೆ ಕಾಲರಾ ಪತ್ತೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಪಿಜಿಯಲ್ಲಿದ್ದ ಮಹಿಳೆಗೆ ಕಾಲರಾ ರೋಗ ಪತ್ತೆಯಾಗಿಲ್ಲ. ಚಿಕಿತ್ಸೆ ಸ್ಪಂದಿಸಿ ಗುಣಮುಖರಾಗಿ ತಮ್ಮ ಊರು ತುಮಕೂರು ಜಿಲ್ಲೆಯ ಶಿರಾಗೆ ತೆರಳಿದ್ದಾರೆ. ಹೀಗಾಗಿ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಇನ್ನೂ ಪಿಜಿಯಲ್ಲಿ 32 ಮಹಿಳೆಯರು ವಾಸವಿದ್ದು, ಯಾರಿಗೂ ಇಂತಹ ತೊಂದರೆ ಕಾಣಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿಸಿಲಿನ ತಾಪ, ಬಿಸಿಗಾಳಿ, ಕಾಲರಾ ಬಗ್ಗೆ ಕಟ್ಟೆಚ್ಚರ ವಹಿಸಲು ಸುತ್ತೋಲೆ ಹೊರಡಿಸಿದ್ದು, ಸಾಂಕ್ರಾಮಿಕ ರೋಗಿಗಳ ಡೇಟಾ ನೀಡಲು ಖಾಸಗಿ ಆಸ್ಪತ್ರೆಗಳಿಗೆ ಸೂಚನೆ ನೀಡಲಾಗಿದೆ. ಕೈ ಶುದ್ಧವಾಗಿರಬೇಕು. ಶುದ್ಧ ಕುಡಿಯುವ ನೀರು ಬಳಸಬೇಕು. ಕೈ ಸ್ವಚ್ಛಗೊಳಿಸಿ ಆಹಾರ ಸೇವಿಸಬೇಕು, ಒಳಚರಂಡಿ ಪೈಪ್ ಅಥವಾ ಕುಡಿಯುವ ನೀರಿನ ಪೈಪ್ ಒಗ್ಗೂಡ(ಒಂದಕ್ಕೂಂದು ಸೇರದಂತೆ)ದಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.