ಬೆಂಗಳೂರು | ದುಬೈನಿಂದ ಬೆಂಗಳೂರಿಗೆ 25 ಐ-ಫೋನ್ಗಳ ಕಳ್ಳಸಾಗಣೆ : ಆರೋಪಿ ವಶಕ್ಕೆ
ಸಾಂದರ್ಭಿಕ ಚಿತ್ರ (PC : Meta AI)
ಬೆಂಗಳೂರು : ದುಬೈನಿಂದ ಬೆಂಗಳೂರಿಗೆ ಅಕ್ರಮವಾಗಿ 25 ಐ-ಫೋನ್ ಮತ್ತು 5 ಆಪಲ್ ವಾಚ್ಗಳನ್ನು ಸಾಗಿಸುತ್ತಿದ್ದ ಉಡುಪಿ ಮೂಲದ ಪ್ರಯಾಣಿಕನನ್ನು ವಿಮಾನ ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿರುವುದಾಗಿ ವರದಿಯಾಗಿದೆ.
ಆರೋಪಿಯಿಂದ ಸುಮಾರು 20 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿದು ಬಂದಿದೆ. ಜು.20ರಂದು ದುಬೈನಿಂದ ಬೆಂಗಳೂರಿಗೆ ಎಮಿರೇಟ್ಸ್ ವಿಮಾನದಲ್ಲಿ ಬಂದ ಪ್ರಯಾಣಿಕನನ್ನು ಖಚಿತ ಮಾಹಿತಿ ಮೇರೆಗೆ ಬೆಂಗಳೂರು ಕಸ್ಟಮ್ಸ್ ಏರ್ ಇಂಟೆಲಿಜೆನ್ಸ್ ಯೂನಿಟ್ನ ಅಧಿಕಾರಿಗಳು ತಪಾಸಣೆ ನಡೆಸಿದ್ದಾಗ, ಅಕ್ರಮವಾಗಿ ವಿದೇಶದಿಂದ ತಂದಿರುವ ಐ-ಫೋನ್ ಮತ್ತು ಆಪಲ್ ವಾಚ್ಗಳು ಪತ್ತೆಯಾಗಿವೆ. ಕಸ್ಟಮ್ಸ್ ಮೂಲಗಳ ಪ್ರಕಾರ ಉಡುಪಿಯ ಕುಂದಾಪುರ ತಾಲೂಕಿನ ತಬ್ರೇಝ್ ಅಹಮದ್ ಗೋಳಿಹೊಳೆ ಎಂಬ ಪ್ರಯಾಣಿಕ ಎಂದು ತಿಳಿದುಬಂದಿದೆ.
ಪ್ರಯಾಣಿಕನನ್ನು ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದು, ಆತ ತನ್ನ ಬ್ಯಾಗ್ನಲ್ಲಿ ಮರೆಮಾಚಿ ಅಕ್ರಮವಾಗಿ ವಸ್ತುಗಳನ್ನು ಸಾಗಿಸುತ್ತಿರುವುದು ಬೆಳಕಿಗೆ ಬಂದಿದೆ. ಕಸ್ಟಮ್ಸ್ ಕಾಯ್ದೆಯ 2016ರ ಬ್ಯಾಗೇಜ್ ನಿಯಮಗಳ ಪ್ರಕಾರ ಒಬ್ಬ ಪ್ರಯಾಣಿಕನಿಗೆ ಗರಿಷ್ಠ 50ಸಾವಿರ ರೂ. ಮೌಲ್ಯದ ವಸ್ತುಗಳನ್ನು ಸಾಗಿಸಲು ಅವಕಾಶವಿದೆ.
ಆದರೆ, ಆತ 25 ಐ-ಫೋನ್ ಮತ್ತು 5 ಆಪಲ್ ವಾಚ್ಗಳನ್ನು ಅಕ್ರಮವಾಗಿ ಸಾಗಿಸುವ ಯತ್ನ ನಡೆದಿದ್ದು, ಪ್ರತಿಯೊಂದು ಐ-ಫೋನ್ ಬೆಲೆ 1 ಲಕ್ಷ ರೂ. ಇದೆ ಎಂದು ಅಂದಾಜಿಸಲಾಗಿದ್ದು, ಪ್ರತಿಯೊಂದು ಐ-ಫೋನ್ಗೆ 50 ಸಾವಿರ ಕಸ್ಟಮ್ಸ್ ಸುಂಕವನ್ನು ಪಡೆಯುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.