ಬೆಂಗಳೂರು | ಸೋನಿಯಾ, ರಾಹುಲ್ ಗಾಂಧಿ ವಿರುದ್ಧ ಅಪಪ್ರಚಾರ : ಬಾಂಗ್ಲಾ ಪತ್ರಕರ್ತ ಸೇರಿ ಇಬ್ಬರ ವಿರುದ್ಧ ಎಫ್ಐಆರ್ ದಾಖಲು
ರಾಹುಲ್ಗಾಂಧಿ, ಸೋನಿಯಾ ಗಾಂಧಿ(PC:PTI)
ಬೆಂಗಳೂರು : ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಹಾಗೂ ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅಪಪ್ರಚಾರ ಮಾಡುತ್ತಿದ್ದ ಆರೋಪದಡಿ ಬಾಂಗ್ಲಾದೇಶದ ಪತ್ರಕರ್ತ ಸೇರಿದಂತೆ ಇಬ್ಬರ ವಿರುದ್ಧ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕೆಪಿಸಿಸಿ ಕಾನೂನು ಘಟಕದ ನಿಯೋಗ ನೀಡಿರುವ ದೂರಿನನ್ವಯ ಬಾಂಗ್ಲಾದೇಶದ ಪತ್ರಕರ್ತ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಹಾಗೂ ಪೋಸ್ಟ್ ಹಂಚಿಕೊಂಡಿದ್ದ ಅದಿತಿ ಘೋಷ್ ಎಂಬವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
‘ಆಗಸ್ಟ್ 23ರಂದು @salaha shoaib ಎನ್ನುವ ಎಕ್ಸ್ ಖಾತೆಯಿಂದ ಪೋಸ್ಟ್ ಮಾಡಿರುವ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ, ಸೋನಿಯಾ ಗಾಂಧಿಯವರ ಅಂತರ್ ಧರ್ಮೀಯ ವಿವಾಹ, ಭಾರತೀಯ ಪೌರತ್ವ ಹಾಗೂ ಅವರ ಧಾರ್ಮಿಕ ಸ್ವಾತಂತ್ರ್ಯವನ್ನು ಉಲ್ಲೇಖಿಸುವ ಮೂಲಕ ಅವರನ್ನು ಐಎಸ್ಐ ಏಜೆಂಟ್ ಎಂಬ ರೀತಿ ಬಿಂಬಿಸಿದ್ದಾರೆ. ರಾಹುಲ್ ಗಾಂಧಿ ಮತ್ತು ಅವರ ವಿದೇಶಿ ಸ್ನೇಹಿತರ ವಿರುದ್ಧ ಅತ್ಯಾಚಾರದ ಆರೋಪ ಮಾಡಿದ್ದಾರೆ' ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಆ ಪೋಸ್ಟ್ ಅನ್ನು ಅದಿತಿ ಘೋಷ್ ಎಂಬವರು 'The Jaipur Dialogues' ಮುಖಾಂತರ ಹಂಚಿಕೊಂಡು ಹೆಚ್ಚು ಜನರಿಗೆ ತಲುಪುವ ರೀತಿಯಲ್ಲಿ ಪ್ರಚಾರ ಮಾಡಿದ್ದಾರೆ. ಆ ಮೂಲಕ ಹರಿಯಾಣ ಹಾಗೂ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರ ಗೌರವಕ್ಕೆ ಚ್ಯುತಿ ಉಂಟು ಮಾಡುತ್ತಿದ್ದಾರೆ. ಸಮಾಜದಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ' ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ದೂರಿನ ಅನ್ವಯ ಸಲಾಹ್ ಉದ್ದೀನ್ ಶೋಯೆಬ್ ಚೌಧರಿ ಹಾಗೂ ಅದಿತಿ ಘೋಷ್ ಎಂಬವರ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಬಂಧಿಸಲು ಕ್ರಮ ಜರುಗಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.