ಜನಸಾಮಾನ್ಯರ ಸಮಸ್ಯೆಗಳನ್ನು ಆಧಾರಿತ ಚರ್ಚೆಗಳಾಗಬೇಕು : ಸ್ಪೀಕರ್ ಯು.ಟಿ.ಖಾದರ್
ಬೆಂಗಳೂರು/ಜೈಪುರ : ಲೋಕಸಭೆ ಮತ್ತು ವಿಧಾನಸಭೆ ಹಾಗೂ ವಿಧಾನ ಪರಿಷತ್‍ನ ಕಾರ್ಯ ಚಟುವಟಿಕೆಗಳ ಬಗ್ಗೆ ಯುವಜನರು ಅರ್ಥಮಾಡಿಕೊಳ್ಳುವುದು ಅತ್ಯಗತ್ಯವಾಗಿದ್ದು, ‘ಇಂಡಿಯನ್ ಯೂತ್ ಪಾರ್ಲಿಮೆಂಟ್’ ಇವುಗಳನ್ನು ಅರಿಯುವ ಉತ್ತಮ ಮತ್ತು ಮಾದರಿ ವೇದಿಕೆಯಾಗಬೇಕು ಎಂದು ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಅವರು ಇಂದಿಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರವಿವಾರ ‘ಅಂತರ್ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನ’ದ ಅಂಗವಾಗಿ ರಾಜಸ್ಥಾನದ ಜೈಪುರದಲ್ಲಿ ನಡೆದ ಇಂಡಿಯನ್ ಯೂತ್ ಪಾರ್ಲಿಮೆಂಟ್‍ನ 27ನೆ ರಾಷ್ಟ್ರೀಯ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಯು.ಟಿ.ಖಾದರ್ ಅವರು ಮಾತನಾಡುತ್ತಿದ್ದರು.
ಇತ್ತೀಚಿನ ಜಾಗತಿಕ ಅಂಕಿ-ಅಂಶಗಳ ಪ್ರಕಾರ, ಭಾರತ ದೇಶವು ಸುಮಾರು 356 ಮಿಲಿಯನ್ ಯುವಕರನ್ನು ಹೊಂದಿದ್ದು, ದೇಶವನ್ನು ‘ಯಂಗ್ ಇಂಡಿಯಾ’ ಎಂದು ಕರೆಯಲಾಗುತ್ತಿದೆ. ದೇಶದಲ್ಲಿನ ಯುವಕರು ಸೇರಿದಂತೆ ಜನಸಾಮಾನ್ಯರ ಸಮಸ್ಯೆಗಳನ್ನು ಆಧಾರಿತ ಚರ್ಚೆ ಮತ್ತು ವಾದಗಳು ಲೋಕಸಭೆ-ವಿಧಾನಸಭೆಗಳಲ್ಲಿ ಮಂಡನೆಯಾಗಬೇಕು ಎಂದು ಅವರು ಹೇಳಿದರು.
ಈ ಕಾರ್ಯಕ್ರಮದಲ್ಲಿ ರಾಜಸ್ಥಾನದ ರಾಜ್ಯಪಾಲ ಹರಿಬಾವು ಕಿಶಾನರಾವ್ ಬಾಗ್ದೆ ಹಾಗೂ ರಾಜಸ್ಥಾನ ವಿಧಾನಸಭೆಯ ಸ್ಪೀಕರ್ ವಾಸುದೇವ್ ದೇವನಾನಿ, ಇಂಡಿಯನ್ ಯೂತ್ ಪಾರ್ಲಿಮೆಂಟ್‍ನ ರಾಷ್ಟ್ರೀಯ ಸಂಚಾಲಕ ಅಶುತೋಷ್ ಜೋಶ್ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.