ಶ್ವಾನಗಳು ಸೇರಿ ಎಲ್ಲ ಪ್ರಾಣಿಗಳಿಗೂ ಗೌರವಯುತ ಬದುಕು ಸಿಗಬೇಕು : ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು ಬೆಂಗಳೂರಿನಲ್ಲಿ ಬೀದಿ ನಾಯಿ ಹಾವಳಿ ಬಗ್ಗೆ ವಿಧಾನಸಭೆಯಲ್ಲಿ ಬಿಸಿ ಬಿಸಿ ಚರ್ಚೆ ನಡೆದಿದ್ದು, ಎಲ್ಲ ಪ್ರಾಣಿ ಪಕ್ಷಿಗಳಿಗೂ ಗೌರವಯುತ ಬದುಕು ನೀಡುವುದು ಸರಕಾರ ಆದ್ಯ ಕರ್ತವ್ಯ ಎಂದು ಸ್ಪೀಕರ್ ಯು.ಟಿ.ಖಾದರ್ ನುಡಿದರು.
ಗುರುವಾರ ವಿಧಾನಸಭೆಯ ಶೂನ್ಯ ವೇಳೆಯಲ್ಲಿ ಬಿಜೆಪಿ ಸದಸ್ಯ ಸತೀಶ್ ರೆಡ್ಡಿ ಪ್ರಸ್ತಾಪಿಸಿ, ಬೀದಿನಾಯಿ ಪ್ರೇಮಿ ಮಹಿಳೆಯೊಬ್ಬರಿಂದಾಗುತ್ತಿರುವ ಸಮಸ್ಯೆಯ ಬಗ್ಗೆ ಗಮನ ಸೆಳೆದರು.
ಬೀದಿಗಳಲ್ಲಿ ಇರುವ ನಾಯಿಗಳನ್ನು ಅಪಾರ್ಟ್‌ಮೆಂಟ್ ಒಳಗಡೆ ಕರೆದುಕೊಂಡು ಬಂದು ಲಿಫ್ಟ್ ನಲ್ಲಿ ಕರೆದೊಯ್ಯಲಾಗ್ತಿದೆ. ಮಕ್ಕಳಿಗೆ ಕಚ್ಚಿದ ಪ್ರಕರಣ ನಡೆದಿದೆ. ನಾವು ನಾಯಿ ಪ್ರೇಮಿಗಳೇ. ಆದರೆ ತಮ್ಮ ಕ್ಷೇತ್ರದ ಮಹಿಳೆಯೊಬ್ಬರು ಅಪಾರ್ಟ್‌ಮೆಂಟ್ ಒಳಗಡೆ ಕರೆದುಕೊಂಡು ಬಂದು ತೊಂದರೆ ಕೊಡುತ್ತಿದ್ದಾರೆ. ಈ ಬಗ್ಗೆ ದೂರು ಕೊಟ್ಟರೂ ಬಿಬಿಎಂಪಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿದರು.
ಇದನ್ನು ಹೀಗೆ ಬಿಟ್ಟರೆ ನಾಳೆ ಮತ್ತೊಬ್ಬರು ಕೋತಿ ತಂದು ಸಾಕುತ್ತಾರೆ, ಮತ್ತೊಬ್ಬರು ಹಸು ಸಾಕುತ್ತಾರೆ ಇದನ್ನು ತಡೆಯಬೇಕಾದ ಅಗತ್ಯ ಇದೆ ಎಂದು ಸದನದಲ್ಲಿ ವಿವರಿಸಿದರು
ಇದಕ್ಕೆ ಧ್ವನಿಗೂಡಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಬೀದಿ ನಾಯಿ ಬೀದಿಯಲ್ಲಿ ಇರಲಿ. ಅಪಾರ್ಟ್‌ಮೆಂಟ್‌ಗೆ ತೆಗೆದುಕೊಂಡು ಹೋಗುವ ಅಗತ್ಯ ಇಲ್ಲ ಎಂದರು.
ಇದಕ್ಕೆ ಉತ್ತರ ಕೊಟ್ಟ ಸಚಿವ ದಿನೇಶ್ ಗುಂಡೂರಾವ್, ಸತೀಶ್ ರೆಡ್ಡಿ ಬಲಶಾಲಿ, ಅವರಿಗೆ ಗೊತ್ತಿಲ್ಲದೆ ನಾಯಿ ಅಲ್ಲಾಡಲ್ಲ ಆ ಕ್ಷೇತ್ರದಲ್ಲಿ ಎಂದು ಕಾಲೆಳೆದರು. ಆದರೆ ಬೀದಿ ನಾಯಿಗಳ ಸಮಸ್ಯೆಗೆ ಕ್ರಮ ಕೈಗೊಳ್ಳಲು ಸೂಕ್ತ ಸೂಚನೆ ಕೊಡುತ್ತೇವೆ. ಅಪಾರ್ಟ್‌ಮೆಂಟ್ ನಲ್ಲಿ ಹೇಗೆ ಬಿಟ್ಟರು? ಈ ಕುರಿತಾದ ದೂರಿನ ಆಧಾರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಚರ್ಚೆ ಮಧ್ಯದಲ್ಲಿ ಯು.ಟಿ.ಖಾದರ್ ಪ್ರಸ್ತಾಪಿಸಿ, ನಾಯಿಗಳು ಸೇರಿದಂತೆ ಎಲ್ಲ ಪ್ರಾಣಿಗಳಿಗೂ ಗೌರವಯುತ ಬದುಕು ನೀಡಬೇಕು. ಅದು ಅವರ ಹಕ್ಕು ಸಹ ಆಗಿದೆ. ಈ ನಿಟ್ಟಿನಲ್ಲಿ ಸರಕಾರ ಯಾರಿಗೂ ತೊಂದರೆ ಆಗದಂತೆ ಗಮನ ನೀಡಬೇಕು ಎಂದು ಸೂಚಿಸಿದರು.