ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಉಪಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ : ಸ್ಪೀಕರ್ ಯು.ಟಿ.ಖಾದರ್

ಬೆಂಗಳೂರು : ಸದನದಲ್ಲಿ ಸದಸ್ಯರು ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡದಿರುವ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಉಪಸಭಾಧ್ಯಕ್ಷರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಶುಕ್ರವಾರ ವಿಧಾನಸಭೆಯ ಕಲಾಪದಲ್ಲಿ ಬಿಜೆಪಿ ಸದಸ್ಯ ಬಿ.ಪಿ.ಹರೀಶ್ ಪ್ರಸ್ತಾಪಿಸಿ, 4 ಅಧಿವೇಶನಗಳಿಂದ ನಾನು ಒಂದು ಪ್ರಶ್ನೆ ಕೇಳಿದ್ದೆ. ಆ ಪ್ರಶ್ನೆಗೆ ಉತ್ತರ ಬಂದಿಲ್ಲ, ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು. ಇದಕ್ಕೆ ದನಿಗೂಡಿಸಿದ ಪ್ರತಿಪಕ್ಷ ನಾಯಕ ಆರ್. ಅಶೋಕ್, ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸದಸ್ಯರು ಕೇಳಿದ ಪ್ರಶ್ನೆಗೆ ಉತ್ತರ ಬಾರದಿರುವುದು ಸರಿಯಲ್ಲ. ಉತ್ತರವನ್ನು ನೀಡಲೇಬೇಕು. ಇದೊಂದು ಗಂಭೀರ ವಿಚಾರ ಎಂದರು.
ಸದಸ್ಯರ ಮಾತಿಗೆ ಸ್ಪಂದಿಸಿದ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್, ಯಾವುದೇ ಸದಸ್ಯರು ಪ್ರಶ್ನೆ ಕೇಳಿದರೆ ಅದಕ್ಕೆ ಅಧಿಕಾರಿಗಳು ಉತ್ತರ ನೀಡಲೇಬೇಕು. ಉತ್ತರ ನೀಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಹಾಗಾಗಿಯೇ ಉಪಸಭಾಧ್ಯಕ್ಷರ ನೇತೃತ್ವದಲ್ಲಿ ಸಮಿತಿ ರಚಿಸಿ ಯಾವ ಯಾವ ಅಧಿಕಾರಿ ಉತ್ತರ ನೀಡಿಲ್ಲ ಎಂಬುದನ್ನು ಪತ್ತೆಹಚ್ಚಿ ಆ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸದನದಲ್ಲಿ ತಕ್ಷಣ ಪರಿಹಾರವಿಲ್ಲ: ವಿಧಾನಸಭೆಯ ಸದಸ್ಯರಾದ ನೀವು ಸದನದಲ್ಲಿ ಪ್ರಶ್ನೆ ಕೇಳಿದ ತಕ್ಷಣ, ಇಲ್ಲಿ ಪರಿಹಾರ ಸಿಗುವುದಿಲ್ಲ ಎಂದು ಯು.ಟಿ.ಖಾದರ್ ಹೇಳಿದರು.
ಪ್ರಶ್ನೋತ್ತರ ಅವಧಿ ವೇಳೆಯಲ್ಲಿ ಕೆ.ಆರ್.ಪೇಟೆ ಶಾಸಕ ಎಚ್.ಟಿ.ಮಂಜು ಅವರು ಪ್ರಶ್ನೆ ಎತ್ತಿ, ಸ್ಥಳೀಯ ಕ್ಷೇತ್ರದಲ್ಲಿ ವಿದ್ಯುತ್, ಟ್ರಾನ್ಸ್ ಫಾರ್ಮರ್ ಸಮಸ್ಯೆ ಕಳೆದ ನಾಲ್ಕು ತಿಂಗಳು ಬಗೆಹರಿದಿಲ್ಲ ಎಂದು ಸದನದ ಗಮನ ಸೆಳೆದರು.
ಈ ವೇಳೆ ಸ್ಪೀಕರ್ ಯು.ಟಿ. ಖಾದರ್ ಅವರು, ಸದನದಲ್ಲಿ ಪ್ರಶ್ನೆ ಕೇಳಿದ ತಕ್ಷಣ ಪರಿಹಾರ ದೊರೆಯುವುದಿಲ್ಲ. ನಾಲ್ಕು ತಿಂಗಳಿಂದ ಸಮಸ್ಯೆ ಇಟ್ಟುಕೊಂಡು ನೀವು ಮಾಡುತ್ತಿದ್ದೀರಿ? ಟ್ರಾನ್ಸ್ ಫಾರ್ಮಾರ್ ಸಮಸ್ಯೆ ಕುರಿತು ಇಂಧನ ಸಚಿವರು, ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಪರಿಹಾರ ತೆಗೆದುಕೊಂಡು, ಸಮಸ್ಯೆ ಇತ್ಯರ್ಥಗೊಳಿಸಬೇಕಿತ್ತು ಎಂದು ಸಲಹೆ ನೀಡಿದರು.
ಆಗ ಮಧ್ಯಪ್ರವೇಶಿಸಿದ ಪ್ರತಿಪಕ್ಷದ ಸದಸ್ಯರು, ಸಭಾಧ್ಯಕ್ಷರೇ ನೀವೇ ಇಲ್ಲಿ ಪರಿಹಾರ ಸಿಗುವುದಿಲ್ಲ ಎಂದರೆ ಹೇಗೆ? ನೀವು ಪೀಠದ ಮೂಲಕ ಸರಕಾರಕ್ಕೆ ಚಾಟಿ ಬೀಸಬೇಕು ಎಂದು ವ್ಯಂಗ್ಯವಾಡಿದರು.