ತಾವರೆಕೆರೆ ವರೆಗೆ ಮೆಟ್ರೋ ವಿಸ್ತರಣೆ | ಸರಕಾರದ ತೀರ್ಮಾನಕ್ಕೆ ಅಭಿನಂದನೆ: ಎಸ್.ಟಿ.ಸೋಮಶೇಖರ್

ಎಸ್.ಟಿ.ಸೋಮಶೇಖರ್
ಬೆಂಗಳೂರು : ನಗರದ ಹೊಸಹಳ್ಳಿಯಿಂದ ಕಡಬಗೆರೆವರೆಗಿನ 3ನೇ ಹಂತದ ಮೆಟ್ರೋ ಮಾರ್ಗವನ್ನು ತಾವರೆಕೆರೆ ಗ್ರಾಮದವರೆಗೂ ವಿಸ್ತರಿಸಲು ತೀರ್ಮಾನಿಸಿರುವ ಸರಕಾರಕ್ಕೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮೈಸೂರು ರಸ್ತೆ ಹಾಗೂ ಮಾಗಡಿ ಮುಖ್ಯರಸ್ತೆ ನಡುವೆ ಬಿಡಿಎ ಕೆಂಪೇಗೌಡ ಬಡಾವಣೆಯನ್ನು ಅಭಿವೃದ್ಧಿಪಡಿಸುತ್ತಿದೆ ಎಂದರು.
ಮೈಸೂರು ರಸ್ತೆಯಲ್ಲಿ ಮೆಟ್ರೋ ರೈಲು ಚಳ್ಳಘಟ್ಟದವರೆಗೆ ಸಂಚರಿಸುತ್ತಿದೆ. ಅಂತೆಯೇ, ಮಾಗಡಿ ಮುಖ್ಯರಸ್ತೆಯಲ್ಲಿ ಮೆಟ್ರೋ ಮೂರನೇ ಹಂತದ (ಕಿತ್ತಳೆ ಮಾರ್ಗ) ವಿಸ್ತೃತ ಯೋಜನಾ ವರದಿ, ಭೂಸ್ವಾಧೀನ ಸೇರಿ ಮೆಟ್ರೋಗೆ ಸಂಬಂಧಿಸಿದ ಪ್ರಕ್ರಿಯೆಗಳು ಪ್ರಗತಿಯಲ್ಲಿದ್ದು, 2029ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಎಸ್.ಟಿ.ಸೋಮಶೇಖರ್ ಹೇಳಿದರು.
ಜತೆಗೆ ಹೊಸ ಮೆಟ್ರೊ ಮಾರ್ಗಗಳಲ್ಲಿ ಡಬಲ್ ಡೆಕ್ಕರ್ ನಿರ್ಮಿಸಿ ವಾಹನ ದಟ್ಟಣೆ ತಪ್ಪಿಸಬೇಕೆಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಸೂಚನೆಯಿಂದ ಮೆಟ್ರೋ ಮೂರನೇ ಹಂತಕ್ಕೂ ಡಬಲ್ ಡೆಕ್ಕರ್ ಸೇರ್ಪಡೆಯಾಗಲಿದೆ. ಇದರಿಂದ ಮಾಗಡಿ ಮುಖ್ಯ ರಸ್ತೆಯಲ್ಲಿ ಸಂಚಾರ ದಟ್ಟಣೆ ನಿವಾರಣೆಯಾಗಲಿದೆ. ಅಲ್ಲದೆ, ಈ ಭಾಗದ ಕ್ಷಿಪ್ರ ಬೆಳವಣಿಗೆ, ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಎಸ್.ಟಿ.ಸೋಮಶೇಖರ್ ತಿಳಿಸಿದರು.