ರಾಜ್ಯ ಬಜೆಟ್ | ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಘೋಷಿಸಿರುವ ಕೊಡುಗೆಗಳೇನು? ಇಲ್ಲಿದೆ ಮಾಹಿತಿ
ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಪ್ರವರ್ಗ 2ಬಿ (ಮುಸ್ಲಿಮ್) ಗುತ್ತಿಗೆದಾರರಿಗೆ ಮೀಸಲಾತಿ

ಬೆಂಗಳೂರು: ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ 2025-26ನೇ ಸಾಲಿನ ರಾಜ್ಯ ಬಜೆಟ್ ಮಂಡಿಸಿದ್ದಾರೆ. ಬಜೆಟ್ ನಲ್ಲಿ ಅಲ್ಪಸಂಖ್ಯಾತರ ಕಲ್ಯಾಣಕ್ಕಾಗಿ ಘೋಷಿಸಿರುವ ಕೊಡುಗೆಗಳ ವಿವರ ಇಂತಿವೆ.
ಸರಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲಾತಿ
ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಅಧಿನಿಯಮದನ್ವಯ ಎರಡು ಕೋಟಿ ರೂ. ಮೊತ್ತದವರೆಗಿನ ಕಾಮಗಾರಿಗಳಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ ಮತ್ತು 2ಬಿ(ಮುಸ್ಲಿಮ್) ಗುತ್ತಿಗೆದಾರರಿಗೆ ಮೀಸಲಾತಿ ಪ್ರಕಟಿಸಲಾಗಿದೆ.
ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಪಿಯು ವರೆಗೆ ತರಗತಿ
ಪ್ರಸಕ್ತ ಕಾರ್ಯನಿರ್ವಹಿಸುತ್ತಿರುವ 250 ಮೌಲಾನಾ ಆಝಾದ್ ಆಂಗ್ಲ ಮಾಧ್ಯಮ ಮಾದರಿ ಶಾಲೆಗಳಲ್ಲಿ ಹಂತ ಹಂತವಾಗಿ ಕರ್ನಾಟಕ ಪಬ್ಲಿಕ್ ಶಾಲೆಗಳ ಮಾದರಿಯಲ್ಲಿ ಪೂರ್ವ ಪ್ರಾಥಮಿಕ ಹಂತದಿಂದ ಪಿ.ಯು.ವರೆಗೂ ತರಗತಿಗಳನ್ನು ಪ್ರಾರಂಭಿಸಲಾಗುವುದು. ಇದಕ್ಕಾಗಿ ಒಟ್ಟಾರೆ 500 ಕೋಟಿ ರೂ. ವೆಚ್ಚದಲ್ಲಿ ಯೋಜನೆ ರೂಪಿಸಲಾಗುವುದು. ಪ್ರಸಕ್ತ ವರ್ಷದಲ್ಲಿ 100 ಕೋಟಿ ರೂ. ಅನುದಾನವನ್ನು ಒದಗಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸದರಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗುವುದು.
ಆಯ್ದ 100 ಉರ್ದು ಮಾಧ್ಯಮದ ಶಾಲೆಗಳ ಉನ್ನತೀಕರಿಣ
ಆಯ್ದ 100 ಉರ್ದು ಮಾಧ್ಯಮದ ಶಾಲೆಗಳಿಗೆ ಕರ್ನಾಟಕ ಪಬ್ಲಿಕ್ ಶಾಲೆ ಮಾದರಿಯಲ್ಲಿ ಮೂಲ ಸೌಕರ್ಯಗಳನ್ನು ಒದಗಿಸಿ ಕಲಿಕಾ ಗುಣಮಟ್ಟವನ್ನು ಹೆಚ್ಚಿಸಲು ಕ್ರಮ ವಹಿಸಿ ಮೌಲಾನಾ ಆಝಾದ್ ಪಬ್ಲಿಕ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು. ಒಟ್ಟಾರೆ 400 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನವಾಗಲಿರುವ ಈ ಯೋಜನೆಗೆ ಈ ವರ್ಷದಲ್ಲಿ 100 ಕೋಟಿ ರೂ. ಒದಗಿಸಲಾಗಿದೆ.
62 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗ ಆರಂಭ
2023-24ನೇ ಸಾಲಿನಲ್ಲಿ ಪದವಿ ಪೂರ್ವ ತರಗತಿಗಳನ್ನು ಪ್ರಾರಂಭಿಸಲಾಗಿರುವ 62 ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ವಾಣಿಜ್ಯ ವಿಭಾಗವನ್ನು ಪ್ರಾರಂಭಿಸಲಾಗುವುದು.
♦ ಮದ್ರಸಗಳಲ್ಲಿ ಧಾರ್ಮಿಕ ಶಿಕ್ಷಣದೊಂದಿಗೆ ಔಪಚಾರಿಕ ಶಿಕ್ಷಣ ನೀಡಲು ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್ ಇತ್ಯಾದಿ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿ, ಈ ವಿದ್ಯಾರ್ಥಿಗಳು NIOS ಮೂಲಕ ಎಸೆಸೆಲ್ಸಿ ಪರೀಕ್ಷೆ ಬರೆಯಲು ಅವಕಾಶವಾಗುವಂತೆ ಸಜ್ಜುಗೊಳಿಸಲಾಗುವುದು.
♦ ಮುಖ್ಯಮಂತ್ರಿಗಳ ಅಲ್ಪಸಂಖ್ಯಾತರ ಕಾಲನಿ ಅಭಿವೃದ್ಧಿ ಯೋಜನೆಯಡಿ 1,000 ಕೋಟಿ ರೂ. ಕ್ರಿಯಾ ಯೋಜನೆಯನ್ನು ತಯಾರಿಸಲಾಗಿದ್ದು, ಕಾಮಗಾರಿಗಳನ್ನು 2025-26ನೇ ಸಾಲಿನಲ್ಲಿ ಅನುಷ್ಠಾನಗೊಳಿಸಲಾಗುವುದು.
♦ ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ವತಿಯಿಂದ ಯುವಕ/ಯುವತಿಯರಿಗೆ ನವೋದ್ಯಮಗಳನ್ನು ಪ್ರಾರಂಭಿಸಲು ಉತ್ತೇಜನ.
♦ ವಕ್ಪ್ ಸಂಸ್ಥೆಗಳ ದುರಸ್ತಿ, ಜೀರ್ಣೋದ್ಧಾರ ಮತ್ತು ಖಬರಸ್ತಾನಗಳಲ್ಲಿ ಮೂಲಸೌಕರ್ಯಕ್ಕಾಗಿ ಹಾಗೂ ಆಸ್ತಿಗಳ ಸಂರಕ್ಷಣೆಗಾಗಿ 150 ಕೋಟಿ ರೂ.
♦ ಅಲ್ಪಸಂಖ್ಯಾತರ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮತ್ತು ವೃತ್ತಿ ಮಾರ್ಗದರ್ಶನಕ್ಕೆ (career guidance)ತರಬೇತಿ.
♦ ಪದವಿ ಶಿಕ್ಷಣದಿಂದ ವಂಚಿತರಾಗುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬೆಂಗಳೂರಿನ ಹಜ್ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (KSOU)ಪ್ರಾದೇಶಿಕ ಕೇಂದ್ರ ತೆರೆದು, ವಿವಿಧ ಪದವಿ/ಸ್ನಾತಕೋತ್ತರ ಪದವಿ ಶಿಕ್ಷಣ ನೀಡಲಾಗುವುದು.
♦ ಅಲ್ಪಸಂಖ್ಯಾತರ 169 ವಸತಿ ಶಾಲೆ/ಕಾಲೇಜುಗಳಲ್ಲಿವ್ಯಾಸಂಗ ಮಾಡುತ್ತಿರುವ 25,000 ವಿದ್ಯಾರ್ಥಿನಿಯರಿಗೆ ಸ್ವಯಂ ರಕ್ಷಣಾ ಕೌಶಲ್ಯ ತರಬೇತಿ.
♦ ಆರ್ಥಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತ ಸಮುದಾಯದವರ ಸರಳ ವಿವಾಹಕ್ಕೆ ಪ್ರೋತ್ಸಾಹ ನೀಡಲು ಸ್ವಯಂಸೇವಾ ಸಂಸ್ಥೆಗಳ ಮೂಲಕ ನಡೆಯುವ ಸಮೂಹ ವಿವಾಹಗಳ ವೆಚ್ಚಗಳಿಗಾಗಿ ಪ್ರತಿ ಜೋಡಿಗೆ 50,000 ರೂ.
♦ ಹಜ್ ಯಾತ್ರಿಕರು ಹಾಗೂ ಅವರ ಸಂಬಂಧಿಕರಿಗೆ ಅಗತ್ಯ ಸೌಲಭ್ಯ ಮತ್ತು ಸೌಕರ್ಯಗಳನ್ನು ಒದಗಿಸಲು ಬೆಂಗಳೂರಿನ ಹಜ್ ಭವನದಲ್ಲಿ ಹೆಚ್ಚುವರಿ ಕಟ್ಟಡ ನಿರ್ಮಾಣ.
♦ ಅಲ್ಪಸಂಖ್ಯಾತ ಮಹಿಳೆಯರ ಉನ್ನತ ಶಿಕ್ಷಣಕ್ಕೆ ಪೂರಕವಾಗಿ 2024-25ನೇ ಸಾಲಿನಲ್ಲಿ ವಕ್ಫ್ ಸಂಸ್ಥೆಗಳ ಖಾಲಿ ನಿವೇಶನಗಳಲ್ಲಿ 15 ಮಹಿಳಾ ಕಾಲೇಜುಗಳ ನಿರ್ಮಾಣಕ್ಕೆ ಕ್ರಮಕೈಗೊಳ್ಳಲಾಗಿದೆ. ಮುಂದುವರಿದು, 2025-26ನೇ ಸಾಲಿನಲ್ಲಿ 16 ಹೊಸ ಮಹಿಳಾ ಕಾಲೇಜುಗಳನ್ನು ಸ್ಥಾಪನೆ.
♦ ರಾಜ್ಯದಲ್ಲಿರುವ ಗುರುದ್ವಾರಗಳಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು 2 ಕೋಟಿ ರೂ. ಅನುದಾನ.
♦ ಬೆಂಗಳೂರಿನಲ್ಲಿ ಬೌದ್ಧ ಅಧ್ಯಯನ ಅಕಾಡಮಿಯನ್ನು ಸ್ಥಾಪನೆ ಹಾಗೂ ಮಹಾಭೋಧಿ ಅಧ್ಯಯನ ಕೇಂದ್ರದ 100 ವರ್ಷಗಳ ಹಳೆಯ ಗ್ರಂಥಾಲಯವನ್ನು 1 ಕೋಟಿ ರೂ. ವೆಚ್ಚದಲ್ಲಿ ಡಿಜಿಟಲೀಕರಣಗೊಳಿಸಿ ಉನ್ನತೀಕರಣ.
♦ ಜೈನ, ಬೌದ್ಧ ಹಾಗೂ ಸಿಖ್ಖ್ ಸಮುದಾಯಗಳ ಸಮಗ್ರ ಅಭಿವೃದ್ಧಿಗಾಗಿ 100 ಕೋಟಿ ರೂ. ಅನುದಾನ ಮೀಸಲು.
♦ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿಗಾಗಿ 250 ಕೋಟಿ ರೂ.
♦ ಜೈನ ಅರ್ಚಕರು, ಸಿಖ್ಖ್ ಮುಖ್ಯ ಗ್ರಂಥಿಗಳು, ಮಸೀದಿಗಳ ಪೇಷ್ ಇಮಾಮ್ ಗಳಿಗೆ ನೀಡುತ್ತಿರುವ ಮಾಸಿಕ ಗೌರವಧನವನ್ನು 6,000 ರೂ. ಗಳಿಗೆ ಹೆಚ್ಚಿಸಲಾಗುವುದು. ಸಿಖ್ಖ್ ಸಹಾಯಕ ಗ್ರಂಥಿಗಳು ಹಾಗೂ ಮೌಝಿನ್ ಗಳಿಗೆ ನೀಡುವ ಮಾಸಿಕ ಗೌರವಧನವನ್ನು 5,000 ರೂ.ಗಳಿಗೆ ಹೆಚ್ಚಳ
♦ ಪ್ರಾಚೀನ ಬೌದ್ಧ ಕೇಂದ್ರವಾಗಿರುವ ಕಲುಬುರಗಿ ಜಿಲ್ಲೆಯ ಚಿತ್ತಾಪುರ ತಾಲ್ಲೂಕಿನಲ್ಲಿ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚನೆ.
♦ ಅಲ್ಪಸಂಖ್ಯಾತರ ಸಮುದಾಯದವರಿಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಹೋಬಳಿ ಮತ್ತು ತಾಲ್ಲೂಕು ಮಟ್ಟದಲ್ಲಿ 50 ಲಕ್ಷ ರೂ. ಹಾಗೂ ಜಿಲ್ಲಾ ಮತ್ತು ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಒಂದು ಕೋಟಿ ರೂ. ವೆಚ್ಚದಲ್ಲಿ ಬಹುಪಯೋಗಿ ಭವನಗಳನ್ನು ನಿರ್ಮಾಣ.
♦ ಅಲ್ಪಸಂಖ್ಯಾತರು ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿರುವ ಪ್ರದೇಶಗಳಲ್ಲಿರುವ ಐ.ಟಿ.ಐ ಗಳಲ್ಲಿ ಹೊಸ ಕೋರ್ಸ್ ಗಳನ್ನು ಹಾಗೂ ಹೆಚ್ಚುವರಿ ತರಗತಿ ಪ್ರಾರಂಭ
♦ KEA ಮುಖಾಂತರ ವೃತ್ತಿಪರ ಕೋರ್ಸ್ ಗಳಲ್ಲಿ ಪ್ರವೇಶ ಪಡೆಯುವ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಐದು ಲಕ್ಷ ರೂ.ಗಳಿಗೆ ಸೀಮಿತಗೊಳಿಸಿ ಶುಲ್ಕದಲ್ಲಿ ಶೇ.50 ರಷ್ಟನ್ನು ಮರುಪಾವತಿ.
♦ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ರಾಷ್ಟ್ರೀಯ ವಿದೇಶಿ ವಿದ್ಯಾರ್ಥಿವೇತನವನ್ನು 20 ಲಕ್ಷ ರೂ.ಗಳಿಂದ 30 ಲಕ್ಷ ರೂ.ಗಳಿಗೆ ಹೆಚ್ಚಳ.
♦ ಉಳ್ಳಾಲದಲ್ಲಿ ಅಲ್ಪಸಂಖ್ಯಾತರ ವಿದ್ಯಾರ್ಥಿನಿಯರಿಗಾಗಿ ವಸತಿ ಸಹಿತ ಪಿಯು ಕಾಲೇಜು ಸ್ಥಾಪನೆ.