ಜ.21 ರಂದು ರಾಜ್ಯ ಕೋರ್ ಕಮಿಟಿ ಸಭೆ : ವಿಜಯೇಂದ್ರ

ಬಿ.ವೈ.ವಿಜಯೇಂದ್ರ
ಬೆಂಗಳೂರು : ಬಿಜೆಪಿ ರಾಜ್ಯದ ಕೋರ್ ಕಮಿಟಿ ಸಭೆ ನಾಳೆ (ಜ.21) ಸಂಜೆ 7 ಗಂಟೆಗೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ರಾಧಾಮೋಹನ್ ದಾಸ್ ಅಗರವಾಲ್, ತಮಿಳುನಾಡಿನಿಂದ ಪೊನ್ನುರಾಧಾಕೃಷ್ಣನ್, ಸಹ ಉಸ್ತುವಾರಿ ಸುಧಾಕರ ರೆಡ್ಡಿ ನಾಳೆ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶಾಸಕರು, ಸಂಸದರು, ಪರಿಷತ್ ಸದಸ್ಯರನ್ನು ಒಳಗೊಂಡ ಚುನಾಯಿತ ಪ್ರತಿನಿಧಿಗಳ ಸಭೆ ನಡೆಯಲಿದೆ ಎಂದರು.
‘ಅಲ್ಲಿ ಅವರ ಅಭಿಪ್ರಾಯ ಪಡೆಯಲಿದ್ದಾರೆ. ಸಂಘಟನೆ ಸಂಬಂಧ ಚರ್ಚಿಸಲಿದ್ದಾರೆ. 4 ಗಂಟೆಗೆ ರಾಜ್ಯದಲ್ಲಿ ನಡೆಯುತ್ತಿರುವ ಸಂಘಟನಾ ಪರ್ವದ ಕುರಿತು ಚರ್ಚೆ ನಡೆಸಲಿದ್ದಾರೆ. ಮಂಡಲ ಅಧ್ಯಕ್ಷರ ಚುನಾವಣೆ ನಡೆದಿದೆ. ಜಿಲ್ಲಾಧ್ಯಕ್ಷರ ನಿಯೋಜನೆ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯಾಧ್ಯಕ್ಷರ ಚುನಾವಣೆ ಬಗ್ಗೆ ಚರ್ಚೆ ನಡೆಯಲಿದೆ ಎಂದು ವಿವರಿಸಿದರು.
ಪಕ್ಷದ ಚುನಾವಣಾ ಅಧಿಕಾರಿಗಳು, ಸಹ ಅಧಿಕಾರಿಗಳು, 13 ಜನ ಮೇಲ್ವಿಚಾರಕರ ಸಭೆಯೂ ನಡೆಯಲಿದೆ. ಈ 3 ಸಭೆಗಳಲ್ಲಿ ಸಂಸದರು, ಶಾಸಕರು, ಪರಿಷತ್ ಸದಸ್ಯರು ಭಾಗವಹಿಸಲಿದ್ದಾರೆ. ರಾಜ್ಯದಲ್ಲಿನ ಪಕ್ಷದ ಸ್ಥಿತಿ, ಸಂಘಟನಾ ವಿಚಾರ, ರಾಜ್ಯಾಧ್ಯಕ್ಷರ ವಿಚಾರ ಸಹಿತ ಎಲ್ಲವೂ ನಾಳೆ ಚರ್ಚೆ ಆಗಲಿದೆ ಎಂದು ವಿಜಯೇಂದ್ರ ಹೇಳಿದರು.