ರಾಜ್ಯ ಶಿಕ್ಷಣ ನೀತಿ ಆಯೋಗವು ಕೆಲವೇ ವ್ಯಕ್ತಿಗಳ ಕೈಗೊಂಬೆ: ಪೋಷಕ ಸಂಘಟನೆ ವಿರೋಧ
ಬೆಂಗಳೂರು: ಕಾಂಗ್ರೆಸ್ ಸರಕಾರವು ನೇಮಿಸಿದ ‘ರಾಜ್ಯ ಶಿಕ್ಷಣ ನೀತಿ ಆಯೋಗ’ವು ಕೆಲವೇ ವ್ಯಕ್ತಿಗಳ ಕೈಗೊಂಬೆಯಾಗಿದ್ದು, ಅದರ ಕಾರ್ಯವೈಖರಿಯು ಅಪ್ರಜಾಸತ್ತತ್ಮಕವೂ, ಅಪಾರದರ್ಶಕವೂ ಆಗಿದೆ ಎಂದು ಕರ್ನಾಟಕ ಖಾಸಗಿ ಶಾಲಾ ಕಾಲೇಜು ಪೋಷಕ ಸಂಘಟನೆಗಳ ಸಮನ್ವಯ ಸಮಿತಿಯು ಖಂಡಿಸಿದೆ.
ಮಂಗಳವಾರ ಪ್ರಕಟನೆ ಹೊರಡಿಸಿರುವ ಸಮಿತಿಯ ರಾಜ್ಯಾಧ್ಯಕ್ಷ ಬಿ.ಎಸ್.ಯೋಗಾನಂದ, ರಾಜ್ಯ ಶಿಕ್ಷಣ ನೀತಿಯನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಮೂಲ ವಾರಸುದಾರನ್ನು ಒಳಮಾಡಿಕೊಳ್ಳುವ ಕುರಿತು ಕಾಂಗ್ರೆಸ್ ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ‘ಅವೈಜ್ಞಾನಿಕವಾದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರದ್ದುಮಾಡಿ ಕರ್ನಾಟಕ ಶಿಕ್ಷಣ ನೀತಿಯ ಅನುಷ್ಠಾನ ಮಾಡುವುದಾಗಿ ಘೋಷಿಸಿತ್ತು. ಅಧಿಕಾರಕ್ಕೆ ಬಂದ ಕಾಂಗ್ರೆಸ್ ಕೊಟ್ಟ ಮಾತಿನಂತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಯನ್ನು ರದ್ದು ಮಾಡಿ, ರಾಜ್ಯ ಶಿಕ್ಷಣ ನೀತಿ ರೂಪಿಸಲು ರಾಜ್ಯ ಶಿಕ್ಷಣ ನೀತಿ ಆಯೋಗವನ್ನು ರಚಿಸಿದೆ ಎಂದಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಕೇವಲ ಅವೈಜ್ಞಾನಿಕ ಮಾತ್ರವಲ್ಲದೆ, ಅಸಂವಿಧಾನಿಕ ಅಪ್ರಜಾಸತ್ತಾತ್ಮಕ, ಅಪಾರದರ್ಶಕವಾಗಿದೆ. ಒಂದು ಗೌಪ್ಯ ರಾಜಕೀಯ ಅಜೆಂಡಾವನ್ನು ಕಾರ್ಯಗತಗೊಳಿಸಲು ರೂಪಿಸಿದ ಕಾರ್ಯಸೂಚಿ ಇದಾಗಿದೆ. ರಾಜ್ಯದಲ್ಲಿ ಹಿಂದಿನ ಬಿಜೆಪಿ ಸರಕಾರ ಶಿಕ್ಷಣವನ್ನು ಸಂಪೂರ್ಣವಾಗಿ ರಾಜಕಾರಣಕ್ಕೆ ಬಳಸಿಕೊಳ್ಳುವ ಮೂಲಕ ಹಾಳು ಮಾಡಿದ್ದಲ್ಲದೆ, ಸಾಕಷ್ಟು ಗೊಂದಲ ಸೃಷ್ಟಿಸಿತ್ತು. ಪೊಳ್ಳು ರಾಷ್ಟ್ರೀಯತೆಯ ಹೆಸರಿನಲ್ಲಿ ಎಳೆ ಮಕ್ಕಳಿಗೆ ವಿಷ ಉಣಿಸುವ ಕೆಲಸ ಮಾಡಿತ್ತು ಎಂದು ತಿಳಿಸಿದ್ದಾರೆ.
ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ರಾಜ್ಯದಲ್ಲಿನ ಹೊಸ ಸರಕಾರವು ಶಿಕ್ಷಣವನ್ನು ಸಾಮಾಜಿಕ ಒಳಿತು ಮತ್ತು ಸಾಮಾಜಿಕ ಪರಿವರ್ತನೆಯ ಸಾಧನವೆಂಬ ವಿಶಾಲ ದೃಷ್ಟಿಯಲ್ಲಿ ಪರಿಭಾವಿಸಬೇಕಾಗುತ್ತದೆ. ಸಂವಿಧಾನ ಹಾಗು ಅಂತರರಾಷ್ಟ್ರೀಯ ಮಾನದ ಹಕ್ಕುಗಳ ಅನ್ವಯ ಶಿಕ್ಷಣ ಒದಗಿಸುವುದು ಸರಕಾರದ ಅದ್ಯತೆಯಾಗಬೇಕಿದೆ ಎಂದು ಹೇಳಿದ್ದಾರೆ.
ಆದರೆ ಇದಕ್ಕೆ ವಿರುದ್ಧವಾಗಿ ರಾಜ್ಯ ಶಿಕ್ಷಣ ನೀತಿ ಆಯೋಗವು ಏಕಪಕ್ಷೀಯವಾಗಿ ಕೆಲವೇ ವ್ಯಕ್ತಿಗಳ ಕೈಗೊಂಬೆಯಾಗಿದೆ. ಅದರ ಕಾರ್ಯ ವೈಖರಿ ಅಪ್ರಜಾಸತ್ತಾತ್ಮಕ ಹಾಗು ಅಪಾರದರ್ಶಕವಾಗಿದೆ. ಈವರೆಗೆ ಕಚೇರಿಯ ವಿವರ, ಸಂಪರ್ಕ ವಿಳಾಸ ಸಾರ್ವಜನಿಕವಾಗಿ ಲಭ್ಯವಿಲ್ಲ. ಎಲ್ಲ ಸಂವಹನವು ಆಂಗ್ಲ ಭಾಷೆಯಲ್ಲಿದೆ. ರಾಜ್ಯ ಶಿಕ್ಷಣ ನೀತಿ ಆಯೋಗದ ಅಧ್ಯಕ್ಷರಿಗೆ ಕನ್ನಡ ಗೊತ್ತಿಲ್ಲ. ಕನ್ನಡವೇ ಗೊತ್ತಿಲ್ಲದೆ ಕನ್ನಡ ನಾಡಿನ ಶಿಕ್ಷಣ ನೀತಿಯನ್ನು ರೂಪಿಸಲು ಹೇಗೆ ಸಾಧ್ಯ ಎಂದು ಅವರು ಪ್ರಶ್ನಿಸಿದ್ದಾರೆ.