ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆ: 3,935 ಕೋಟಿ ರೂ.ಹೂಡಿಕೆಯ 73 ಕೈಗಾರಿಕಾ ಯೋಜನೆಗಳಿಗೆ ಅಸ್ತು: ಎಂ.ಬಿ.ಪಾಟೀಲ್
ಬೆಂಗಳೂರು: ರಾಜ್ಯದಲ್ಲಿ 3,935 ಕೋಟಿ ರೂ.ಗಳಿಗೂ ಹೆಚ್ಚಿನ ಹೂಡಿಕೆಯಾಗಲಿರುವ ಒಟ್ಟು 73 ಯೋಜನಾ ಪ್ರಸ್ತಾವನೆಗಳಿಗೆ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿಯ ಸಭೆಯಲ್ಲಿ ಅನುಮೋದನೆ ನೀಡಲಾಗಿದ್ದು, ಇದರಿಂದ 14,497 ಉದ್ಯೋಗಾವಕಾಶ ಸೃಷ್ಟಿಯಾಗಲಿವೆ.
ಶುಕ್ರವಾರ ನಗರದಲ್ಲಿ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಅನುಮೋದನೆ ನೀಡಿರುವ ಯೋಜನೆಗಳ ಪೈಕಿ 10 ಯೋಜನೆಗಳಲ್ಲಿ ತಲಾ 50 ಕೋಟಿ ರೂ.ಗೂ ಹೆಚ್ಚು ಹೂಡಿಕೆ ಆಗಲಿದೆ ಎಂದು ಮಾಹಿತಿ ನೀಡಿದರು.
ಈ ಯೋಜನೆಗಳಲ್ಲಿ ಇಟಿಎಲ್ ಸೆಕ್ಯೂರ್ ಸ್ಪೇಸ್, ದಶ್ ಪಿ.ವಿ.ಟೆಕ್ನಾಲಜೀಸ್, ಮೈಲಾರ್ ಇನ್ಫ್ರಾ, ಸ್ಯಾಂಗೋ ಆಟೋಮೋಟೀವ್ ಪಾಟ್ರ್ಸ್, ವೇನಾಸ್ ಲ್ಯಾಬ್ಸ್, ಸಿಂಬಯೋ ಜನರಿಕ್ಸ್ ಇಂಡಿಯಾ, ಎಂಎಎಫ್ ಕ್ಲಾತಿಂಗ್, ಎಸ್‍ಎಎ ಪ್ರಾಕ್ಟ್ಸ್, ನಿಫ್ಕೊ ಸೌತ್ ಇಂಡಿಯಾ ಮ್ಯಾನಫ್ಯಾಕ್ಚರಿಂಗ್ ಮತ್ತು ರೆನ್ಸ್ ಬಯೋಟೆಕ್ ಕಂಪೆನಿಗಳು ಸೇರಿವೆ ಎಂದು ಅವರು ಹೇಳಿದರು.
ಈ ಕಂಪೆನಿಗಳು ದೇವನಹಳ್ಳಿ, ಸಿರಾ ಕೈಗಾರಿಕಾ ಪ್ರದೇಶ, ಹೂವಿನಹಡಗಲಿ, ರಾಮನಗರ, ಕಡೇಚೂರು, ಚಾಮರಾಜನಗರ, ಗೌರಿಬಿದನೂರು ಮತ್ತು ತುಮಕೂರಿನ ವಸಂತ ನರಸಾಪುರಗಳಲ್ಲಿ ಹೂಡಿಕೆ ಮಾಡಲಿದ್ದು, ಒಟ್ಟು 9,200 ಉದ್ಯೋಗಗಳನ್ನು ಸೃಷ್ಟಿಸಲಿವೆ. ಮೇಲ್ಕಂಡ ಉದ್ದಿಮೆಗಳು ಕನಿಷ್ಠ 96 ಕೋಟಿ ರೂ.ಗಳಿಂದ ಹಿಡಿದು ಗರಿಷ್ಠ 490.50 ಕೋಟಿ ರೂ.ವರೆಗೂ ಬಂಡವಾಳ ತೊಡಗಿಸಲಿವೆ ಎಂದು ಅವರು ಮಾಹಿತಿ ನೀಡಿದರು.
ಇದಲ್ಲದೆ, ಕನಿಷ್ಠ 15ಕೋಟಿ ರೂ.ಗಳಿಂದ ಹಿಡಿದು ಗರಿಷ್ಠ 50 ಕೋಟಿ ರೂ.ವರೆಗೂ ಹೂಡಿಕೆ ಮಾಡುವ ಪ್ರಸ್ತಾವನೆ ಸಲ್ಲಿಸಿದ್ದ 59 ಹೊಸ ಯೋಜನೆಗಳಿಗೂ ಒಪ್ಪಿಗೆ ನೀಡಲಾಗಿದೆ. ಇದರಿಂದ 5,297 ಮಂದಿಗೆ ಉದ್ಯೋಗ ಸಿಗಲಿದೆ. ಜೊತೆಗೆ, ಹೆಚ್ಚುವರಿ ಬಂಡವಾಳ ಹೂಡಿಕೆಯ 5 ಯೋಜನೆಗಳಿಗೂ ಅನುಮೋದನೆ ಕೊಟ್ಟಿದ್ದು, ಇದರಿಂದ 87.67 ಕೋಟಿ ರೂ. ಬಂಡವಾಳ ರಾಜ್ಯಕ್ಕೆ ಹರಿದು ಬರಲಿದೆ ಎಂದು ಎಂ.ಬಿ.ಪಾಟೀಲ್ ಹೇಳಿದರು.
ರಾಜ್ಯ ಸರಕಾರವು ಉದ್ಯಮಸ್ನೇಹಿಯಾಗಿದ್ದು, ಹೂಡಿಕೆದಾರರಿಗೆ ಸುಗಮ ಒಪ್ಪಿಗೆ ಸಿಗುವಂತೆ ನಿಜವಾದ ಅರ್ಥದಲ್ಲಿ ಏಕಗವಾಕ್ಷಿ ಪದ್ಧತಿಯನ್ನು ಜಾರಿಗೆ ತಂದಿದೆ. ಹೂಡಿಕೆದಾರರನ್ನು ಉತ್ತೇಜಿಸುವಂತಹ ಹಲವು ಅಂಶಗಳನ್ನು 2020-25ರ ಕೈಗಾರಿಕಾ ನೀತಿಯಲ್ಲಿ ಅಳವಡಿಸಿಕೊಂಡಿದ್ದು, ಕೈಗಾರಿಕಾ ಕ್ಷೇತ್ರದ ಬೆಳವಣಿಗೆಗೆ ಆದ್ಯತೆ ಕೊಡಲಾಗಿದೆ. ಇದರಲ್ಲಿ ಪ್ರಾದೇಶಿಕ ಅಸಮಾನತೆ ನಿವಾರಣೆಗೂ ಗಮನ ಹರಿಸಲಾಗಿದ್ದು, ರಾಜ್ಯದ ಎಲ್ಲ ಭಾಗಗಳಲ್ಲೂ ಹೂಡಿಕೆ ಆಗುವಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ವಿವರಿಸಿದರು.
ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆ ಗುಂಜನ್ ಕೃಷ್ಣ, ಕೆಐಎಡಿಬಿ ವ್ಯವಸ್ಥಾಪಕ ನಿರ್ದೇಶಕ ಡಾ.ಮಹೇಶ್, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.