ರಾಜ್ಯ ವಕ್ಫ್ ಬೋರ್ಡ್ ಚುನಾವಣೆ | ಮುತವಲ್ಲಿ ವಿಭಾಗದಿಂದ ಅನ್ವರ್ ಬಾಷಾ ಹಾಗೂ ಮುಹಮ್ಮದ್ ಅಲಿ ಅಲ್ ಹುಸೈನಿ ಆಯ್ಕೆ
ಸಾಂದರ್ಭಿಕ ಚಿತ್ರ
ಬೆಂಗಳೂರು : ರಾಜ್ಯ ವಕ್ಫ್ ಬೋರ್ಡ್ನ ಮುತವಲ್ಲಿ ವಿಭಾಗದ ಎರಡು ಸ್ಥಾನಗಳಿಗೆ ನ.19ರಂದು ನಡೆದಿದ್ದ ಚುನಾವಣೆಯಲ್ಲಿ ವಕ್ಫ್ ಬೋರ್ಡ್ನ ನಿಕಟಪೂರ್ವ ಅಧ್ಯಕ್ಷ ಕೆ.ಅನ್ವರ್ ಬಾಷಾ ಹಾಗೂ ಗುಲ್ಬರ್ಗಾದ ಖ್ವಾಜಾ ಬಂದೇ ನವಾಝ್ ದರ್ಗಾದ ಸಜ್ಜಾದ ನಶೀನ್ ಹಫೀಝ್ ಸೈಯದ್ ಮುಹಮ್ಮದ್ ಅಲಿ ಅಲ್ ಹುಸೈನಿ ಚುನಾಯಿತರಾಗಿದ್ದಾರೆ.
ಗುರುವಾರ ಇಲ್ಲಿನ ಶಾಂತಿನಗರದಲ್ಲಿರುವ ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಮತಗಳ ಎಣಿಕೆ ಪ್ರಕ್ರಿಯೆ ನಡೆಸಿ ಚುನಾವಣಾ ಫಲಿತಾಂಶವನ್ನು ಪ್ರಕಟಿಸಲಾಯಿತು. ಅನ್ವರ್ ಬಾಷಾ ಮೊದಲನೆ ಸ್ಥಾನಗಳಿಸಿದರು. ಮುಹಮ್ಮದ್ ಅಲಿ ಅಲ್ ಹುಸೈನಿ ಎರಡನೆ ಸ್ಥಾನ ಪಡೆದರು.
ಇವರ ಸಮೀಪದ ಪ್ರತಿಸ್ಪರ್ಧಿ ಸರ್ವರ್ ಬೇಗ್ 240 ಮತಗಳನ್ನು ಪಡೆಯುವ ಮೂಲಕ ಪರಾಭವಗೊಂಡರು. ಮುತವಲ್ಲಿ ವಿಭಾಗದ ಎರಡು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಒಟ್ಟು 6 ಮಂದಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಅನ್ವರ್ ಬಾಷಾ, ಮುಹಮ್ಮದ್ ಅಲಿ ಅಲ್ ಹುಸೈನಿ ಹಾಗೂ ಸರ್ವರ್ ಬೇಗ್ ನಡುವೆ ತೀವ್ರ ಪೈಪೋಟಿ ಎದುರಾಗಿತ್ತು.
ಅವಿರೋಧ ಆಯ್ಕೆ :
ರಾಜ್ಯ ವಕ್ಫ್ ಮಂಡಳಿಯಲ್ಲಿ ಸಂಸದರ ವಿಭಾಗದಿಂದ ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸಿರ್ ಹುಸೇನ್, ಶಾಸಕಾಂಗ ವಿಭಾಗದಿಂದ ಎನ್.ಎ.ಹಾರಿಸ್, ಕನೀಝ್ ಫಾತಿಮಾ, ರಾಜ್ಯ ಬಾರ್ ಕೌನ್ಸಿಲ್ನಿಂದ ಆರ್.ಅಬ್ದುಲ್ ರಿಯಾಝ್ ಖಾನ್, ಆಸಿಫ್ ಸೇಠ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.