ಅಕ್ರಮ ಕಟ್ಟಡ ನಿರ್ಮಾಣದ ವಿರುದ್ಧ ಕಠಿಣ ಕ್ರಮ: ಡಿಸಿಎಂ ಡಿ.ಕೆ.ಶಿವಕುಮಾರ್
Photo credit : X@INCKarnataka
ಬೆಂಗಳೂರು: "ನಗರದಾದ್ಯಂತ ಅಕ್ರಮ ಕಟ್ಟಡಗಳ ಬಗ್ಗೆ ಸರ್ವೇ ಕಾರ್ಯ ಮಾಡಲಾಗುವುದು. ಕಟ್ಟಡ ವಿನ್ಯಾಸ ಹೊಂದಿರದವರಿಗೆ ಯಾವುದೇ ಕಾರಣಕ್ಕೂ ನೋಂದಣಿ ಮಾಡಿಕೊಡಬಾರದು ಎಂದು ಕಂದಾಯ ಇಲಾಖೆಗೆ ಸೂಚನೆ ನೀಡಲಾಗುವುದು. ಕಡಿಮೆ ದುಡ್ಡಿಗೆ ನಿವೇಶನ ತೆಗೆದುಕೊಂಡು ಮಾರಾಟ ಮಾಡಲು ಈ ರೀತಿ ಮಾಡಲಾಗುತ್ತದೆ. ಇಂತಹ ಅಕ್ರಮಗಳನ್ನು ತಡೆಗಟ್ಟುವ ಕಾರಣಕ್ಕಾಗಿ ರೇರಾ ಕಾಯ್ದೆ ಜಾರಿಯಲ್ಲಿದೆ" ಎಂದರು.
"21 ಕಾರ್ಮಿಕರರು ಕಟ್ಟಡದ ಅವಶೇಷಗಳ ಮಧ್ಯೆ ಸಿಲುಕಿದ್ದಾರೆ. ಇಬ್ಬರು ಕಾರ್ಮಿಕರು ಮೃತ ಪಟ್ಟಿದ್ದಾರೆ. 14 ಜನರ ರಕ್ಷಣೆ ಮಾಡಲಾಗಿದ್ದು, ಏಳು ಮಂದಿ ಕಾರ್ಮಿಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎನ್ ಡಿಆರ್ ಎಫ್ ಮತ್ತು ಎಸ್ ಡಿ ಆರ್ ಎಫ್ ತಂಡದವರು ಅತ್ಯಂತ ಜಾಗರೂಕವಾಗಿ ತರಾತುರಿಯಲ್ಲಿ ರಕ್ಷಣಾ ಕೆಲಸ ಮಾಡುತ್ತಿದ್ದಾರೆ. ಆಂಧ್ರ ಮತ್ತು ಬಿಹಾರ ರಾಜ್ಯದ ಕಾರ್ಮಿಕರು ಇಲ್ಲಿ ಕೆಲಸ ಮಾಡುತ್ತಿದ್ದರು. ಮೃತಪಟ್ಟಿರುವ ಒಬ್ಬ ಕಾರ್ಮಿಕರ ಗುರುತು ಸಿಕ್ಕಿದ್ದು, ಆತ ಬಿಹಾರದವರು ಎಂದು ತಿಳಿದುಬಂದಿದೆ" ಎಂದರು.
"ಕಟ್ಟಡ ನಿರ್ಮಾಣ ಗುತ್ತಿಗೆದಾರ, ನಿವೇಶನದ ಮಾಲಕ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು. ರಕ್ಷಣೆ ಕಾರ್ಯ ಮುಗಿದ ನಂತರ ಕಾರ್ಮಿಕರಿಗೆ ಪರಿಹಾರವನ್ನು ಕೊಡಲಾಗುವುದು" ಎಂದರು.
ಬಾಗಿಲು ಒಡೆದು ರಕ್ಷಣೆ ಮಾಡಲು ಸೂಚನೆ
"ನಿರೀಕ್ಷೆಗೂ ಮೀರಿ ಹೆಚ್ಚಿನ ಮಳೆ ಸುರಿದಿದೆ. ಕೇಂದ್ರೀಯ ವಿರಹ ಬಡಾವಣೆಯಲ್ಲಿ ಏಳೆಂಟು ಕುಟುಂಬಗಳು ಕೆಳಗೆ ಬರದೆ ಬಾಗಿಲು ಮುಚ್ಚಿಕೊಂಡು ರಕ್ಷಣಾ ಕಾರ್ಯಕ್ಕೆ ಸಹಕರಿಸುತ್ತಿಲ್ಲ. ಏನಾದರೂ ಅವಘಡ ಆಗುವ ಮುಂಚಿತವಾಗಿ ಬಾಗಿಲನ್ನು ಒಡೆದು ಅವರ ರಕ್ಷಿಸಿ ಎಂದು ಸೂಚನೆ ನೀಡಿದ್ದೇನೆ" ಎಂದು ತಿಳಿಸಿದರು.