ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಕಠಿಣ ಕಾನೂನು ಕ್ರಮ ಅಗತ್ಯ: ಬಿಎಸ್ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ
ಬೆಂಗಳೂರು: ಸಮಾಜದಲ್ಲಿ ದ್ವೇಷ ಬಿತ್ತುವ ಉದ್ದೇಶದಿಂದ ಮಹಿಳೆಯರ ಕುರಿತು ಕೀಳಾಗಿ ಮಾತನಾಡಿರುವ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ರಾಜ್ಯ ಸರಕಾರ ಸ್ವಯಂ ಪ್ರಕರಣ ದಾಖಲಿಸಿಕೊಂಡು ತುರ್ತು ಕಠಿಣ ಕಾನೂನು ಕ್ರಮ ಜರುಗಿಸುವ ಅಗತ್ಯವಿದೆ ಎಂದು ಬಿಎಸ್ಪಿ ಪಕ್ಷದ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಇತ್ತೀಚಿಗೆ ಮಂಡ್ಯದಲ್ಲಿ ನಡೆದ ಹನುಮಾನ್ ಸಂಕೀರ್ತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿರುವ ಕಲ್ಲಡ್ಕ ಪ್ರಭಾಕರ ಭಟ್ ಮುಸ್ಲಿಂ ಮಹಿಳೆಯರ ಕುರಿತು ನೀಡಿರುವ ಹೇಳಿಕೆ ಕೇವಲ ಆ ಧರ್ಮದ ಮಹಿಳೆಯರಷ್ಟೇ ಅಲ್ಲ, ಎಲ್ಲ ಧರ್ಮದ ಮಹಿಳೆಯರಿಗೂ ಅಪಮಾನವಾದಂತಾಗಿದೆ. ಇದರ ವಿರುದ್ಧ ಸರಕಾರ ಹಿಂದೇಟು ಹಾಕದೆ ಕಾನೂನು ಕ್ರಮಕ್ಕೆ ಮುಂದಾಗಲಿ ಎಂದು ಒತ್ತಾಯಿಸಿದರು.
ಕೋಮುದ್ವೇಷ ಹರಡಿಸಿ ರಾಜಕೀಯ ಲಾಭಕ್ಕೆ ಹೆಣ್ಮಕ್ಕಳ ಮಾನ ಮರ್ಯಾದೆಗೆ ಕುಂದು ತರಲಾಗಿದೆ. ಈಗಾಗಲೇ ಇದರ ವಿರುದ್ದ ಹಲವು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗಿವೆ. ಅವರ ವಿರುದ್ದ ಜಾಮೀನು ರಹಿತ ಪ್ರಕರಣ ದಾಖಲಾಗಿದೆ. ಅದನ್ನ ಗಮನಿಸಿ ಸರಕಾರ ಕೂಡಲೇ ಅವರನ್ನು ಬಂಧಿಸಬೇಕು ಎಂದು ಅವರು ಉಲ್ಲೇಖಿಸಿದರು.
ಇನ್ನೂ, ರಾಜ್ಯದಲ್ಲಿ ಕನ್ನಡ ಕಡ್ಡಾಯವಾಗಬೇಕು ಎಂಬುದನ್ನು ಎತ್ತಿ ತೋರಿಸಿದ್ದಕ್ಕೆ ಕನ್ನಡ ಪರ ಹೋರಾಟಗಾರರನ್ನು ಬಂಧಿಸಿರುವುದು ಖಂಡನೀಯವಾಗಿದ್ದು, ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಮತ್ತು ಕನ್ನಡಪರ ಹೋರಾಟಗಾರರ ಮೇಲೆ ದಾಖಲಿಸಿರುವ ಎಲ್ಲಾ ಕೇಸುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ನಾಡು ನುಡಿಗಾಗಿ ಧ್ವನಿಗೂಡಿಸಿದವರನ್ನು ಸರಕಾರ ಬಂಧಿಸುತ್ತಿದೆ. ಈ ಮೂಲಕ ಕನ್ನಡ ಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ. ಹಲವು ವರ್ಷಗಳಿಂದ ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಇರಬೇಕು ಎನ್ನುವ ನಿಯಮ ಇದ್ದರೂ ಯಾಕೆ ಪಾಲನೆಯಾಗುತ್ತಿಲ್ಲ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಹೋರಾಟ ಮಾಡುವ ಮುನ್ನವೇ ಎಚ್ಚೆತ್ತು ಕನ್ನಡ ನಾಮಫಲಕ ಹಾಕದವರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೆ ಪ್ರತಿಭಟನೆ ಏಕೆ ನಡೆಯುತ್ತಿತ್ತು ಎಂದು ಪ್ರಶ್ನಿಸಿದರು.