ಕೆರೆ ತುಂಬಿಸುವ ಯೋಜನೆಗೆ ವಿಸ್ತೃತ ವರದಿ ಸಲ್ಲಿಸಿ: ಸಚಿವ ಬೋಸರಾಜು
ಬೆಂಗಳೂರು: ರಾಜ್ಯದಲ್ಲಿ ಕೆರೆ ತುಂಬಿಸುವ ಯೋಜನೆಗಳಿಂದ ಅಂತರ್ಜಲದ ಮೇಲೆ ಆಗಿರುವ ಪರಿಣಾಮಗಳ ಬಗ್ಗೆ ವಿಸ್ತೃತ ವರದಿಯನ್ನು ನೀಡುವಂತೆ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸೋಮವಾರ ಇಲ್ಲಿನ ವಿಕಾಸಸೌಧದಲ್ಲಿ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ದಿ ಪ್ರಾಧಿಕಾರ, ಅಂತರ್ಜಲ ಇಲಾಖೆ ಹಾಗೂ ಅಟಲ್ ಭೂಜಲ್ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದಿನ 10 ವರ್ಷಗಳಿಗೆ ಹೋಲಿಸಿದರೆ ಕಳೆದ ಕೆಲವು ವರ್ಷಗಳಲ್ಲಿ 117 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಹೆಚ್ಚಾಗಿದೆ ಎಂದರು.
119 ತಾಲ್ಲೂಕುಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗಿರುವುದು ಅಂಕಿ ಸಂಖ್ಯೆಗಳಿಂದ ತಿಳಿದು ಬಂದಿದೆ. ಕೆರೆ ತುಂಬುವ ಯೋಜನೆಗಳನ್ನು ಕೈಗೊಳ್ಳಲಾಗಿರುವಂತಹ ಜಿಲ್ಲೆಗಳಾದ ಕೋಲಾರ, ರಾಮನಗರ, ಚಿಕ್ಕಬಳ್ಳಾಪುರದಂತಹ ಜಿಲ್ಲೆಗಳಲ್ಲಿ ಅಂತರ್ಜಲ ಮಟ್ಟ ಏರಿಕೆಯಾಗಿದೆ. ಈ ಹಿನ್ನಲೆಯಲ್ಲಿ ಕೆರೆ ತುಂಬುವ ಯೋಜನೆಗಳಿಂದ ಆಗಿರುವಂತಹ ಪರಿಣಾಮದ ಬಗ್ಗೆ ವಿಸ್ತೃತ ಅಧ್ಯಯನ ಅಗತ್ಯವಿದೆ. ಬರಗಾಲದ ತೀವ್ರತೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಧೀರ್ಘಕಾಲೀನ ಯೋಜನೆಗಳನ್ನು ಕೈಗೊಳ್ಳಲು ಇದು ನೆರವಾಗಲಿದೆ. ಈ ಬಗ್ಗೆ ಅಧ್ಯಯನ ಕೈಗೊಂಡು ವರದಿಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು.
ಜಲ ಸಂವರ್ಧನೆ ಯೋಜನೆಯ ಅಡಿಯಲ್ಲಿ ರಚಿಸಲಾಗಿರುವಂತಹ ಕೆರೆ ಸಂಘಗಳ ಮೂಲಕ ಬ್ಯಾಂಕುಗಳಲ್ಲಿ ನಿಶ್ಚಿತ ಠೇವಣಿಗಳನ್ನು ಇಡಲಾಗಿದೆ. ಕಳೆದ ಹಲವಾರು ವರ್ಷಗಳಲ್ಲಿ ಕೆರೆ ಸಂಘಗಳ ಮೂಲಕ ಇರಿಸಲಾದ ಠೇವಣಿಗಳ ಸರಿಯಾದ ನಿರ್ವಹಣೆ ಅಗದೇ ಇರುವುದು ಸಚಿವರ ಗಮನಕ್ಕೆ ಬಂದಿತು. ಈ ಬಗ್ಗೆ ಅಧಿಕಾರಿಗಳಿಂದ ಸರಿಯಾದ ಮಾಹಿತಿ ದೊರೆಯದೇ ಇರುವ ಬಗ್ಗೆ ಸಚಿವರು ಕೋಪಗೊಂಡರು. ನಿಶ್ಚಿತ ಠೇವಣಿಯ ಸರಿಯಾದ ನಿರ್ವಹಣೆ ಮಾಡುವುದು ಅಯಾ ಅಧಿಕಾರಿಗಳ ಕರ್ತವ್ಯವಾಗಿದೆ. ಇದರಲ್ಲಿ ವಿಫಲರಾಗುವವರ ಮೇಲೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವರು ಎಚ್ಚರಿಕೆ ನೀಡಿದರು.
ಕೆರೆ ಸಂಜೀವಿನ ಯೋಜನೆಯ ಅಡಿಯಲ್ಲಿ ಕೆರೆಯಿಂದ ತೆಗೆಯಲಾಗುವ ಹೂಳಿನ ಬಗ್ಗೆ ಮೊದಲೇ ರೈತರಿಗೆ ಮಾಹಿತಿ ನೀಡುವ ಕಾರ್ಯ ಮಾಡಬೇಕು. ಬೀಜ ಬಿತ್ತುವಂತಹ ಸಮಯದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಂಡಲ್ಲಿ ಹೆಚ್ಚಿನ ರೈತರು ಹೂಳನ್ನ ತಗೆದುಕೊಂಡು ಹೋಗುತ್ತಾರೆ. ಆದರೆ, ಕಾಲೋಚಿತವಲ್ಲದ ಅನುಷ್ಠಾನಕ್ಕೆ ಸರಿಯಾದ ಪ್ರತಿಕ್ರಿಯೆ ದೊರಕುವುದಿಲ್ಲ. ಈ ಹಿನ್ನಲೆಯಲ್ಲಿ ಕೆರೆ ಸಂಜೀವಿನಿ ಯೋಜನೆಯ ಪ್ರಾರಂಭಕ್ಕೂ ಮುನ್ನ ರೈತರಿಗೆ ಮಾಹಿತಿ ನೀಡಬೇಕು. ಕೆರೆ ಯಲ್ಲಿ ಹೂಳನ್ನು ತಗೆಯುವ ಮೂಲಕ ಆಯಾ ಕೆರೆಗಳ ನೀರು ತುಂಬುವ ಸಾಮಥ್ರ್ಯವೂ ಹೆಚ್ಚಾಗುವಂತೆ ನೋಡಿಕೊಳ್ಳಬೇಕು ಎಂದು ಅವರು ಸೂಚಿಸಿದರು.