ಬೆಂಗಳೂರಿನಲ್ಲಿ ಅಮೆರಿಕಾ ರಾಯಭಾರ ಕಚೇರಿ ಪ್ರಾರಂಭಿಸಲು ಬೆಂಬಲ: ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: ಬೆಂಗಳೂರಿನಲ್ಲಿ ರಾಯಭಾರಿ ಕಚೇರಿ ಪ್ರಾರಂಭಿಸಲು ಕರ್ನಾಟಕ ಸರಕಾರವು ಅಮೆರಿಕಾ ಸರಕಾರಕ್ಕೆ ಎಲ್ಲ ಬೆಂಬಲವನ್ನು ನೀಡಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸೋಮವಾರ ಇಲ್ಲಿನ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಅಮೆರಿಕಾ ವಿಶ್ವ ವಿದ್ಯಾಲಯಗಳ ಸಭೆಯಲ್ಲಿ ಮಾತನಾಡಿದ ಅವರು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಗೂ ಇತರೆ ಜನರು ಕಾರ್ಯನಿಮಿತ್ತ ಯುಎಸ್‍ಗೆ ತೆರಳುತ್ತಿದ್ದಾರೆ. ಅವರಿಗೆ ವೀಸಾ ಹಾಗೂ ಇತರೆ ಔಪಚಾರಿಕತೆಗಳಿಗೆ ಅನುಕೂಲವಾಗುವಂತೆ ಇಲ್ಲಿಯೇ ಯುಎಸ್ ರಾಯಭಾರಿ ಕಚೇರಿ ತೆರೆಯಲಾಗುತ್ತದೆ ಎಂದರು.
ಯುಎಸ್ ಟ್ರೇಡ್ ಮಿಷನ್‍ನ ಪ್ರತಿನಿಧಿಗಳು ಫೆ.12 ರಿಂದ ಫೆ.20ರವರೆಗೆ ದಕ್ಷಿಣ ಭಾರತದ ಪ್ರಮುಖ ನಗರಗಳಿಗೆ ಭೇಟಿ ನೀಡುತ್ತಿದ್ದಾರೆ. ಅಮೆರಿಕಾದ ಶಿಕ್ಷಣ ಸಂಸ್ಥೆಗಳನ್ನು ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳೊಂದಿಗೆ ಸಂಪರ್ಕಿಸಲು ಮತ್ತು ವಿದ್ಯಾರ್ಥಿಗಳು ಪರಸ್ಪರ ಲಾಭದಾಯಕ ಸಹಯೋಗವನ್ನು ಮುನ್ನಡೆಸಲು ಅವರು ಪ್ರಯತ್ನಿಸುತ್ತಾರೆ ಎಂದು ಹೇಳಿದರು.
ಯುಎಸ್ ಟ್ರೇಡ್ ಮಿಷನ್‍ನ ಪ್ರತಿನಿಧಿಗಳ ನಿಯೋಗವು ಫೆ.14 ರಿಂದ ಫೆ15ರವರೆಗೆ ಮಂಗಳೂರು ಮತ್ತು ಮಣಿಪಾಲಕ್ಕೆ ತೆರಳುತ್ತದೆ. ಫೆ.16 ಮತ್ತು ಫೆ.17 ಕೊಚ್ಚಿಯಲ್ಲಿ ವಿದ್ಯಾರ್ಥಿಗಳನ್ನು ಭೇಟಿ ಮಾಡಿ, ಫೆ.19 ಮತ್ತು ಫೆ.20ರಂದು ಕೊಯಮತ್ತೂರಿನಲ್ಲಿ ವಿದ್ಯಾರ್ಥಿಗಳನ್ನು ನಿಯೋಗವು ಭೇಟಿ ಮಾಡಲಿದೆ ಎಂದು ಅವರು ತಿಳಿಸಿದರು.
ನಿಯೋಗವು ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ, ಟೆಕ್ಸಾಸ್-ಸ್ಯಾನ್ ಆಂಟೋನಿಯೊ ವಿಶ್ವವಿದ್ಯಾಲಯ, ಅರಿಜೋನಾ ಸ್ಟೇಟ್ ಯೂನಿವರ್ಸಿಟಿ ಮತ್ತು ಅರ್ಕಾನ್ಸಾಸ್ ವಿಶ್ವವಿದ್ಯಾಲಯದ ಹಿರಿಯ ಪ್ರತಿನಿಧಿಗಳನ್ನು ಒಳಗೊಂಡಿದೆ. ಮಾ.11 ರಂದು ಚೆನ್ನೈಗೆ ಭೇಟಿ ನೀಡಲಿದೆ. ಸುಸ್ಥಿರ ಮತ್ತು ಸುರಕ್ಷಿತ ಶುದ್ಧ ಇಂಧನ ಮಾರುಕಟ್ಟೆಗಳನ್ನು ಅಭಿವೃದ್ಧಿಪಡಿಸಲು ಕಂಪೆನಿಗಳು ಮಿಷನ್‍ನಲ್ಲಿ ಭಾಗವಹಿಸುತ್ತವೆ ಎಂದು ಅವರು ತಿಳಿಸಿದರು.