ಬೆಂಗಳೂರು ವಿವಿಯಲ್ಲಿ ಪಿಎಚ್‍ಡಿ ವಿದ್ಯಾರ್ಥಿ ಅನುಮಾನಾಸ್ಪದ ಸಾವು
ಬೆಂಗಳೂರು : ಬೆಂಗಳೂರು ವಿಶ್ವ ವಿದ್ಯಾನಿಲಯದ ಜ್ಞಾನಭಾರತಿ ಆವರಣದಲ್ಲಿರುವ ಸಂಶೋಧನ ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ಅನುಮಾನಾಸ್ಪಾದ ರೀತಿಯಲ್ಲಿ ವಿದ್ಯಾರ್ಥಿಯೊಬ್ಬ ಸಾವಿಗೀಡಾದ ಘಟನೆ ವರದಿಯಾಗಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ರಂಗನಹಳ್ಳಿ ಮೂಲದ ರಂಗನಾಥ್ ನಾಯಕ್(27) ಮೃತ ವಿದ್ಯಾರ್ಥಿ ಎಂದು ಗುರುತಿಸಿಲಾಗಿದ್ದು, ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ವಿದ್ಯಾರ್ಥಿ ಬೆಂವಿವಿಯ ಭೂಗೋಳಶಾಸ್ತ್ರ ವಿಭಾಗದಲ್ಲಿ ಪ್ರಥಮ ವರ್ಷದ ಸಂಶೋಧನಾ ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿದ್ದರು ಎಂದು ಗೊತ್ತಾಗಿದೆ.
ಬುಧವಾರ ವಿದ್ಯಾರ್ಥಿ ನಿಲಯದಲ್ಲಿ ತಿಂಡಿ ತಿಂದು ಕೊಠಡಿಗೆ ಹೋಗಿ ಬಾಗಿಲು ಹಾಕಿಕೊಂಡು ಮಲಗಿದ್ದರು. ಮಧ್ಯಾಹ್ನದ ವೇಳೆಯಲ್ಲಿ ಆತನ ಸ್ನೇಹಿತರು ಬಾಗಿಲು ಬಡಿದಾಗ ಎದ್ದಿರಲಿಲ್ಲ ಎನ್ನಲಾಗಿದೆ. ಸಂಜೆ 6 ಗಂಟೆಯಲ್ಲಿ ಸ್ನೇಹಿತರು ರಂಗನಾಥ್‍ನನ್ನು ಎಬ್ಬಿಸಲು ಬಾಗಿಲು ಬಡೆದಿದ್ದು, ಕಿಟಿಕಿ ಮೂಲಕ ನೀರು ಹಾಕಿದರೂ ಎದ್ದೇಳದ ಕಾರಣ, ವಿವಿಯ ಆಡಳಿತ ಮಂಡಳಿ ಮತ್ತು ಜ್ಞಾನಭಾರತಿ ಪೊಲೀಸ್ ಠಾಣೆಗೆ ವಿಷಯ ತಲುಪಿಸಿದ್ದಾರೆ.
ಬಳಿಕ ಪೊಲೀಸ್ ಸಿಬ್ಬಂದಿ ಮತ್ತು ವಿವಿ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಬಾಗಿಲು ಒಡೆದು ನೋಡಿದಾಗ ವಿದ್ಯಾರ್ಥಿ ಚಾಪೆಯ ಮೇಲೆ ಮಲಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೂಗಿನಲ್ಲಿ ರಕ್ತ ಸುರಿದು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಾವಿಗೆ ನಿಖರವಾದ ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಈ ಸಂಬಂಧ ಜ್ಞಾನಭಾರತಿ ಠಾಣಾ ಪೊಲಿಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.
‘ವಿದ್ಯಾರ್ಥಿ ರಂಗನಾಥ್ ನಾಯಕ್ ಕೆಲ ತಿಂಗಳುಗಳ ಹಿಂದೆ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದರು. ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು ಎಂದು ಮೃತ ವಿದ್ಯಾರ್ಥಿಯ ತಂದೆ ತಿಳಿಸಿದ್ದಾರೆ. ವಿದ್ಯಾರ್ಥಿಯ ಸಾವು ಬಹಳ ದುಃಖ ತಂದಿದೆ. ಈ ವಿಷಯವನ್ನು ಉನ್ನತ ಶಿಕ್ಷಣ ಸಚಿವರ ಗಮನಕ್ಕೂ ತಂದಿದ್ದೇವೆ. ಸಿಂಡಿಕೇಟ್ ಸಭೆಯಲ್ಲಿ ವಿದ್ಯಾರ್ಥಿ ಕುಟುಂಬಕ್ಕೆ ವಿವಿ ವತಿಯಿಂದ ಪರಿಹಾರ ನೀಡಲು ತೀರ್ಮಾನ ತೆಗೆದುಕೊಳ್ಳುತ್ತೇವೆ. ಈಗಾಗಲೇ ವಿದ್ಯಾರ್ಥಿ ಕುಟುಂಬಸ್ಥರಿಗೆ ಭೂಗೋಳಶಾಸ್ತ್ರ ವಿಭಾಗದ ಪ್ರಾಧ್ಯಪಕರು ಪ್ರಾಥಮಿಕವಾಗಿ ಹಣದ ನೆರವನ್ನು ಒದಗಿಸಿದ್ದಾರೆ’
ಪ್ರೊ.ಜಯಕರ ಎಸ್.ಎಂ. ಬೆಂವಿವಿ ಕುಲಪತಿ