ಖಾಸಗಿ ಶಾಲಾ-ಕಾಲೇಜುಗಳನ್ನು ತುಳಿಯುವ ವ್ಯವಸ್ಥಿತ ಕೆಲಸ ಆಗುತ್ತಿದೆ: ರಮೇಶ್ ಬಾಬು
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯಲ್ಲಿ ಉತ್ತಮ ಆಯುಕ್ತರು, ನಿರ್ದೇಶಕರು ಮತ್ತು ಅಧಿಕಾರಿಗಳು ಇದ್ದರೂ, ಸ್ವಹಿತಾಸಕ್ತಿಗಾಗಿ ಕೆಲವರು ಅಧಿಕಾರಿಗಳ ದಾರಿ ತಪ್ಪಿಸಿ ಪದೇ ಪದೇ ಸುತ್ತೋಲೆಗಳನ್ನು ಹೊರಡಿಸುವುದರ ಮೂಲಕ ಕರ್ನಾಟಕ ಮೂಲದ ಖಾಸಗಿ ಶಾಲಾ ಕಾಲೇಜುಗಳನ್ನು ತುಳಿಯುವ ವ್ಯವಸ್ಥಿತ ಕೆಲಸವನ್ನು ಮಾಡುತ್ತಿದ್ದಾರೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ರಮೇಶ್ ಬಾಬು ಆರೋಪಿಸಿದ್ದಾರೆ.
ರವಿವಾರ ಈ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಶಾಲಾ ಶಿಕ್ಷಣ ಇಲಾಖೆ ಹೊರಡಿಸುವ ಸುತ್ತೋಲೆಗಳು ನಮ್ಮ ರಾಜ್ಯ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲಾ ಕಾಲೇಜುಗಳಿಗೆ ಅನ್ವಯಿಸುತ್ತದೆ. ಆದರೆ ಕೇಂದ್ರ ಪಠ್ಯಕ್ರಮದ ಶಾಲಾ ಕಾಲೇಜುಗಳಿಗೆ ಅನ್ವಯಿಸುವುದಿಲ್ಲ ಎಂದು ಹೇಳಿದ್ದಾರೆ.
ರಾಜ್ಯದ ಗ್ರಾಮೀಣ ಪ್ರದೇಶದ ಬಹುತೇಕ ಖಾಸಗಿ ಶಾಲಾ ಕಾಲೇಜುಗಳು ನಷ್ಟದಲ್ಲಿ ನಡೆಯುತ್ತಿದ್ದು, ಶಾಲಾ ಶಿಕ್ಷಣ ಇಲಾಖೆಯ ಸುತ್ತೋಲೆಗಳು ಇಂತಹ ಶಾಲಾ ಕಾಲೇಜುಗಳನ್ನು ಶಾಶ್ವತವಾಗಿ ಮುಚ್ಚುವಂತೆ ಮಾಡುತ್ತಿದೆ. ಇಲಾಖೆಯ ಇಂತಹ ಸುತ್ತೋಲೆಗಳನ್ನು ಬಳಸಿಕೊಂಡು ಇತರೆ ಇಲಾಖೆಗಳು ಖಾಸಗಿ ಶಾಲಾ ಕಾಲೇಜುಗಳನ್ನು ಶೋಷಣೆ ಮಾಡುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಸುತ್ತೋಲೆಗಳು: ರಾಜ್ಯದ ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ನಿಗದಿತವಾದ(ಕನಿಷ್ಠ 26 ಸಾವಿರ ಚದರ ಅಡಿ ) ಸ್ಥಳ ಮತ್ತು ಕಟ್ಟಡವನ್ನು ಹೊಂದಿರಬೇಕು. ಕಡ್ಡಾಯವಾಗಿ ಮೂಲ ಸೌಕರ್ಯಗಳನ್ನು ಹೊಂದಿರಬೇಕು. ಪ್ರತಿವರ್ಷ ನವೀಕರಣವನ್ನು ಪಡೆಯಬೇಕು. ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆಯ ವತಿಯಿಂದ ದೃಢೀಕರಣ ಪತ್ರ ಮತ್ತು ಅಗ್ನಿಶಾಮಕ ಇಲಾಖೆಯಿಂದ ಅನುಮತಿ ಪತ್ರ ಪಡೆಯಬೇಕು ಎಂದು ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯ ಸರಕಾರ ನಿಗದಿಪಡಿಸುವ ಶಿಕ್ಷಣ ಶುಲ್ಕಕ್ಕಿಂತ ಹೆಚ್ಚು ಶಿಕ್ಷಣ ಶುಲ್ಕ ಪಡೆಯುವಂತಿಲ್ಲ. ನುರಿತ ಶಿಕ್ಷಕರನ್ನು ಹೊಂದಿರಬೇಕು ಮತ್ತು ರಾಜ್ಯ ಸರಕಾರದ ನಿಯಮದ ಅನ್ವಯ ವೇತನ ಪಾವತಿಸಬೇಕು. ರಾಜ್ಯ ಸರಕಾರದ ಯೋಜನೆ, ಕಾರ್ಯಕ್ರಮಗಳಿಗೆ ಖಾಸಗಿ ಶಾಲಾ ಕಾಲೇಜುಗಳ ಶಿಕ್ಷಕರ ಸೇವೆಯನ್ನು ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಅವರು ಹೇಳಿದ್ದಾರೆ.
ಸುಪ್ರೀಂಕೋರ್ಟ್ ನಿರ್ದೇಶನದ ಅನ್ವಯ ಸುರಕ್ಷತೆಯ ದೃಷ್ಟಿಯಿಂದ ಸರಕಾರಿ ಮತ್ತು ಖಾಸಗಿ ಶಾಲಾ ಕಾಲೇಜುಗಳ ಕಟ್ಟಡ, ಅಗ್ನಿಶಾಮಕ ದೃಢೀಕರಣ ಪತ್ರ ನೀಡಬೇಕಾಗಿದ್ದು, ಇದನ್ನು ಕೇವಲ ಖಾಸಗಿ ಶಾಲಾ ಕಾಲೇಜುಗಳಿಗೆ ಕಡ್ಡಾಯಗೊಳಿಸಿದ್ದು, ಭ್ರಷ್ಟಾಚಾರಕ್ಕೆ ಅವಕಾಶವಾಗಿದೆ ಎಂದು ರಮೇಶ್ ಬಾಬು ಆರೋಪಿಸಿದ್ದಾರೆ.
ಕರ್ನಾಟಕದ ಹೊರಗಿನ ಕೆಲವು ಶಿಕ್ಷಣ ಸಂಸ್ಥೆಗಳು ಖಾಸಗಿ ಕಟ್ಟಡಗಳನ್ನು ಬಾಡಿಗೆ ಪಡೆದು ರಾಜ್ಯದಲ್ಲಿ ಶಾಲಾ ಕಾಲೇಜು ನಡೆಸುತ್ತಿದ್ದು, ಈ ಸಂಬಂಧ ಕರ್ನಾಟಕ ಹೈಕೋರ್ಟ್ ತೀರ್ಪನ್ನು ನೀಡಿ ಕನಿಷ್ಠ ಸ್ಥಳಾವಕಾಶ ಇಲ್ಲದ ಈ ಸಂಸ್ಥೆಗಳನ್ನು ಮುಚ್ಚಲು ಆದೇಶ ನೀಡಿದ್ದರೂ ಶಿಕ್ಷಣ ಇಲಾಖೆಯಿಂದ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ.
ಸರಕಾರ ರಾಜ್ಯದಲ್ಲಿ 25 ವರ್ಷದಿಂದ ನಡೆಯುತ್ತಿರುವ ಎಲ್ಲ ಮಾಧ್ಯಮದ ಶಾಲಾ ಕಾಲೇಜುಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಿದರೆ ಸಾವಿರಾರು ಶಿಕ್ಷಕ ಕುಟುಂಬಗಳಿಗೆ ಅನುಕೂಲವಾಗುತ್ತದೆ. ಈ ಕುರಿತು ಇಲಾಖೆ ವರದಿ ನೀಡುತ್ತಿಲ್ಲ. ಖಾಸಗಿ ಶಾಲಾ ಕಾಲೇಜುಗಳನ್ನು ಗುರಿ ಮಾಡಿಕೊಂಡು ಪದೇ ಪದೇ ಸುತ್ತೋಲೆಗಳನ್ನು ನೀಡದಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಾರೆ.
ಶೈಕ್ಷಣಿಕ ವರ್ಷದ ಕೊನೆಯಭಾಗದಲ್ಲಿ ಇಂತಹ ಸುತ್ತೋಲೆಗಳನ್ನು ಹೊರಡಿಸುವುದು ಕೇವಲ ಪ್ರಚಾರದ ಭಾಗವಾಗುತ್ತದೆ. ಇದರ ಬದಲು ಖಾಸಗಿ ಶಾಲಾ ಕಾಲೇಜುಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಶೈಕ್ಷಣಿಕ ತಜ್ಞರೊಂದಿಗೆ ಚರ್ಚೆ ಮಾಡಿ ಸುತ್ತೋಲೆಗಳನ್ನು ನೀಡಿದರೆ ಅನುಕೂಲವಾಗುತ್ತದೆ ಎಂದು ರಮೇಶ್ ಬಾಬು ಹೇಳಿದ್ದಾರೆ.
ಶಾಲಾ ಶಿಕ್ಷಣ ಇಲಾಖೆಯು ಜ.1ರಂದು ಹೊರಡಿಸಿರುವ ಸುತ್ತೋಲೆ ಸಂಖ್ಯೆ 1159941 ತಡೆಹಿಡಿಯಲು ಮತ್ತು ಇಂತಹ ಸುತ್ತೋಲೆಗಳನ್ನು ಪದೇ ಪದೇ ನೀಡದಂತೆ ನಿರ್ದೇಶನ ನೀಡಬೇಕು. ಕರ್ನಾಟಕ ಮೂಲದ ರಾಜ್ಯ ಪಠ್ಯಕ್ರಮದ ಖಾಸಗಿ ಶೈಕ್ಷಣಿಕ ಸಂಸ್ಥೆಗಳನ್ನು ಕರ್ನಾಟಕದ ಹೊರಗಿನ ಅಥವಾ ಕೇಂದ್ರ ಪಠ್ಯಕ್ರಮದ ಶೈಕ್ಷಣಿಕ ಸಂಸ್ಥೆಗಳ ಜೊತೆ ಹೋಲಿಕೆ ಮಾಡದಂತೆ ನಿರ್ದೇಶನ ನೀಡಬೇಕು ಎಂದು ಅವರು ಕೋರಿದ್ದಾರೆ.
ಇದರ ಜೊತೆಗೆ ಖಾಸಗಿ ಶಾಲಾ ಕಾಲೇಜುಗಳ ಆಡಳಿತ ಮಂಡಳಿಗಳ ಜೊತೆ ವಿಚಾರ ವಿನಿಮಯ ಮಾಡಲು ಒಂದು ಸಮಯವನ್ನು ನಿಗದಿ ಪಡಿಸಿ ಶೈಕ್ಷಣಿಕ ವ್ಯವಸ್ಥೆಯ ಪ್ರಗತಿಯಲ್ಲಿ ಖಾಸಗಿ ಶಾಲಾ ಕಾಲೇಜುಗಳು ಹೆಚ್ಚು ಜವಾಬ್ದಾರಿಯಿಂದ ತೊಡಗಿಸಿಕೊಳ್ಳಲು ಅವಕಾಶ ನೀಡುವಂತೆ ರಮೇಶ್ ಬಾಬು ಮನವಿ ಮಾಡಿದ್ದಾರೆ.