‘ಇನ್ವೆಸ್ಟ್ ಕರ್ನಾಟಕ’ದ ಲಾಭ ಕನ್ನಡಿಗರಿಗೆ ದೊರೆಯಲಿ : ಟಿ.ಎ.ನಾರಾಯಣಗೌಡ

ಬೆಂಗಳೂರು : ಬಂಡವಾಳ ಹೂಡಿಕೆ, ಉದ್ಯಮಶೀಲತೆಗೆ ಪ್ರೊತ್ಸಾಹ ಎಲ್ಲವೂ ಸರಿಯೇ. ಆದರೆ ಅದು ಈ ನಾಡಿನ ಜನರನ್ನು ಒಳಗೊಳ್ಳದಿದ್ದರೆ ಅದಕ್ಕೆ ಅರ್ಥವಿಲ್ಲ. ಇನ್ವೆಸ್ಟ್ ಕರ್ನಾಟಕದ ಬಹುಪಾಲು ಲಾಭ ಕನ್ನಡಿಗರಿಗೆ ದೊರೆಯುವಂತಾಗಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ತಿಳಿಸಿದ್ದಾರೆ.
ಮಂಗಳವಾರ ಈ ಕುರಿತು ಪ್ರಕಟಣೆ ನೀಡಿರುವ ಅವರು, ಫೆ.11ರಂದು ವಿಶ್ವ ಹೂಡಿಕೆದಾರರ ಸಮಾವೇಶ, ಇನ್ವೆಸ್ಟ್ ಕರ್ನಾಟಕ ಆರಂಭಗೊಳ್ಳುತ್ತಿದೆ. 10 ಲಕ್ಷ ಕೋಟಿ ಹೂಡಿಕೆಯ ನಿರೀಕ್ಷೆಯನ್ನು ರಾಜ್ಯ ಸರಕಾರ ಇಟ್ಟುಕೊಂಡಿದೆ. ಕರ್ನಾಟಕದಲ್ಲಿ ಬಂಡವಾಳ ಹೂಡಿಕೆಗೆ ಉತ್ತೇಜನ ನೀಡುವುದು ಸರಿಯಾದ ಕ್ರಮ. ಇದನ್ನು ಸ್ವಾಗತಿಸುತ್ತೇನೆ. ಆದರೆ ಈ ಸಂದರ್ಭದಲ್ಲಿ ರಾಜ್ಯ ಸರಕಾರ ಮತ್ತು ಹೂಡಿಕೆದಾರರಿಗೆ ಇರಬೇಕಾದ ಸಾಮಾಜಿಕ ಜವಾಬ್ದಾರಿಗಳನ್ನು ಮರೆಯುವಂತಿಲ್ಲ ಎಂದು ಹೇಳಿದ್ದಾರೆ.
ಇನ್ವೆಸ್ಟ್ ಕರ್ನಾಟಕದ ಮೂಲಕ ರಾಜ್ಯ, ಹೊರರಾಜ್ಯಗಳಲ್ಲಿ ಇರುವ ಕನ್ನಡಿಗ ಉದ್ಯಮಿಗಳಿಗೆ ಹೆಚ್ಚಿನ ಆದ್ಯತೆ ದೊರೆಯುವಂತಾಗಬೇಕು. ಯಾವುದೇ ಉದ್ಯಮ ಕರ್ನಾಟಕಕ್ಕೆ ಬಂದರೂ ಸಿ ಮತ್ತು ಡಿ ದರ್ಜೆಯ ಎಲ್ಲ ಹುದ್ದೆಗಳು ಕನ್ನಡದ ಮಕ್ಕಳಿಗೆ ದೊರೆಯುವಂತಾಗಬೇಕು. ಇತರ ಹುದ್ದೆಗಳಲ್ಲಿ ಶೇ. 60ರಷ್ಟು ಕನ್ನಡಿಗರಿಗೇ ದೊರೆಯಬೇಕು ಎಂದು ಒತ್ತಾಯ ಮಾಡಿದ್ದಾರೆ.
ಹಿಂದೆ ಕರ್ನಾಟಕದಲ್ಲಿ ಬಂಡವಾಳ ಹೂಡಿದವರು ಸರಕಾರ ನೀಡಿದ ಎಲ್ಲ ಸಹಾಯವನ್ನು ಪಡೆದು, ರಿಯಾಯಿತಿ ದರದಲ್ಲಿ ಭೂಮಿ, ತೆರಿಗೆ ರಜೆ, ಕಡಿಮೆ ದರದಲ್ಲಿ ವಿದ್ಯುತ್, ನೀರಿನ ಸೌಲಭ್ಯ ಇತ್ಯಾದಿಗಳನ್ನು ಪಡೆದು ಬೆಳೆದು ನಿಂತವು. ಆದರೆ ಕನ್ನಡಿಗರಿಗೆ ಉದ್ಯೋಗ ಕೊಡಿ ಎಂದು ಕೇಳಿದಾಗ "ನಾವು ಅರ್ಹತೆ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳುತ್ತೇವೆ" ಎಂದು ದುರಂಹಕಾರದ ಹೇಳಿಕೆಗಳನ್ನು ನೀಡಿದವು. ಇದು ಕೃತಘ್ನತೆಯ ಪರಮಾವಧಿ ಮಾತ್ರವಲ್ಲ, ಹತ್ತಿದ ಏಣಿಯನ್ನು ಒದೆಯುವ ಅಹಂಕಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕದಲ್ಲಿ ಹೊರರಾಜ್ಯದ ವಲಸೆ ಪ್ರಮಾಣ ಮಿತಿಮೀರಿ ಹೋಗಿರುವ ಈ ಸಂದರ್ಭದಲ್ಲಿ ಹೊಸ ಉದ್ಯಮಗಳಲ್ಲೂ ಹೊರರಾಜ್ಯದವರನ್ನೇ ತುಂಬಿದರೆ ಕರ್ನಾಟಕದ ಚಹರೆಯೇ ಬದಲಾಗುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ಹೊಸ ಉದ್ಯಮಿಗಳ ಜೊತೆಯಲ್ಲಿ ಬರುವ ಹೊಸ ವಲಸಿಗರ ಸಮಸ್ಯೆಯನ್ನು ನಾವು ಎದುರಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.
ಕನ್ನಡ, ಕರ್ನಾಟಕ, ಕನ್ನಡಿಗರ ಕುರಿತಾಗಿ ಅಪಾರ ಕಾಳಜಿ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸೂಕ್ಷ್ಮ ವಿಚಾರಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ ಎಂಬುದು ನನ್ನ ನಂಬಿಕೆ. ಕನ್ನಡಿಗರ ಪಾಲಿಗೆ'ಇನ್ವೆಸ್ಟ್ ಕರ್ನಾಟಕ' ಭಾಗ್ಯದ ಬಾಗಿಲು ತೆರೆಯಬೇಕೇ ಹೊರತು ಕನ್ನಡಿಗರನ್ನು ಕರ್ನಾಟಕದಲ್ಲಿ ಅತಂತ್ರರನ್ನಾಗಿ ಮಾಡಬಾರದು ಎಂದು ತಿಳಿಸಿದ್ದಾರೆ.