ಮೆಟ್ರೋ ಪ್ರಯಾಣ ದರ ಏರಿಕೆ | ಸಂಸತ್ನಲ್ಲಿ ಪ್ರತಿಧ್ವನಿ : ಪ್ರಯಾಣ ದರ ಇಳಿಕೆಗೆ ತೇಜಸ್ವಿ ಸೂರ್ಯ ಒತ್ತಾಯ

ತೇಜಸ್ವಿ ಸೂರ್ಯ
ಬೆಂಗಳೂರು : ಬೆಂಗಳೂರಿನ ನಮ್ಮ ಮೆಟ್ರೋ ಪ್ರಯಾಣ ದರ ಏರಿಕೆ ವಿಚಾರ ಲೋಕಸಭೆಯಲ್ಲಿ ಪ್ರತಿಧ್ವನಿಸಿದ್ದು, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ‘ಹೆಚ್ಚಳ ಮಾಡಿರುವ ನಮ್ಮ ಮೆಟ್ರೋ ಪ್ರಯಾಣ ದರʼವನ್ನು ಕೂಡಲೇ ಇಳಿಕೆ ಮಾಡಬೇಕು’ ಎಂದು ಒತ್ತಾಯಿಸಿದ್ದಾರೆ.
ಮಂಗಳವಾರ ಸಂಸತ್ನ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ತೇಜಸ್ವಿ ಸೂರ್ಯ, ನಮ್ಮ ಮೆಟ್ರೊ ರೈಲಿನಲ್ಲಿ ಕಡಿಮೆ ಅಂತರದ ಪ್ರಯಾಣ ಮಾಡುವವರೂ ಮೊದಲು ಪಾವತಿಸುವುದಕ್ಕಿಂತ ದ್ವಿಗುಣ ಹಣ ಪಾವತಿಸುತ್ತಿದ್ದಾರೆ. ನಮ್ಮ ಮೆಟ್ರೊ ಪ್ರಯಾಣ ಬೆಲೆ ಏರಿಕೆ ಮಧ್ಯಮ ವರ್ಗದ ಜನರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ಮೆಟ್ರೋದಲ್ಲಿ ಕಡಿಮೆ ಅಂತರದ ಪ್ರಯಾಣ ಮಾಡುವವರಿಗೂ ಶೇ.100ರಷ್ಟು ದರ ಹೆಚ್ಚಳವಾಗಿದೆ. ಇದು ಬೆಂಗಳೂರು ನಗರಕ್ಕೆ ಸುಸ್ಥಿರ ಸಾರ್ವಜನಿಕ ಸಾರಿಗೆಯಾಗುವ ಬದಲು ದರ ಏರಿಕೆಯಿಂದಾಗಿ ಮೆಟ್ರೊ ಸಂಪರ್ಕವಿರುವ ನಗರಗಳಲ್ಲೇ ಬೆಂಗಳೂರು ಮೆಟ್ರೊ ಪ್ರಯಾಣ ದರ ದುಬಾರಿಯಾಗಿದೆ. ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಪ್ರಯಾಣದ ದರದ ವ್ಯತ್ಯಾಸವನ್ನು ಪರಿಶೀಲಿಸಿ, ಸಾಮಾನ್ಯ ಜನರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲು ಟಿಕೆಟ್ ದರ ನಿಗದಿಪಡಿಸಬೇಕು ಎಂದು ತೇಜಸ್ವಿ ಸೂರ್ಯ ಆಗ್ರಹಿಸಿದರು.