ಮೇಕೆದಾಟು ಯೋಜನೆಗೆ ಬೆಂಬಲ ನೀಡಿರುವ ದೇವೇಗೌಡರಿಗೆ ಧನ್ಯವಾದಗಳು: ರಮೇಶ್ ಬಾಬು
ಬೆಂಗಳೂರು: “ಮೇಕೆದಾಟು ಯೋಜನೆಗೆ ಬೆಂಬಲ ನೀಡಿರುವ ಮಾಜಿ ಪ್ರಧಾನಿ ಎಚ್.ಡಿ ದೇವೆಗೌಡ ಅವರಿಗೆ ಧನ್ಯವಾದಗಳು. ಈ ಯೋಜನೆಗೆ ವಿರೋಧ ಮಾಡುತ್ತಿರುವ ಬಿಜೆಪಿಯ ಆರ್. ಅಶೋಕ್ ಹಾಗೂ ಇತರ ನಾಯಕರು ದೇವೇಗೌಡರಿಂದ ಸಲಹೆ ಪಡೆಯಲಿ” ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರಾದ ರಮೇಶ್ ಬಾಬು ಅವರು ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು “ಮೇಕೆದಾಟು ಯೋಜನೆ ಜಾರಿಗೆ ಡಿ.ಕೆ.ಶಿವಕುಮಾರ್ ಅವರು ಮತ್ತು ಕಾಂಗ್ರೆಸ್ ಪಕ್ಷ ದೊಡ್ಡ ಹೋರಾಟ ಮಾಡಿತ್ತು. ಈ ಯೋಜನೆಗೆ ಅನುಮೋದನೆ ನೀಡಬೇಕು ಎಂದು ಕೇಂದ್ರ ಸರ್ಕಾರದ ಮುಂದೆ ಪ್ರಸ್ತಾವನೆ ಇಡಲಾಗಿದೆ. ಈ ಮಧ್ಯೆ ಹಿರಿಯರಾದ ದೇವೇಗೌಡರು ಈ ಯೋಜನೆ ಪರವಾಗಿ ಮಾತನಾಡಿದ್ದಾರೆ. ಪಕ್ಷಾತೀತವಾಗಿ ಈ ಯೋಜನೆ ಪರವಾಗಿ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ. ಅವರ ಈ ಬೆಂಬಲಕ್ಕೆ ಧನ್ಯವಾದಗಳು, ಅವರ ಹೇಳಿಕೆಯನ್ನು ಕಾಂಗ್ರೆಸ್ ಪಕ್ಷದ ಪರವಾಗಿ ಸ್ವಾಗತಿಸುತ್ತೇನೆ" ಎಂದರು.
2019ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಾಗ 7 ಸ್ಥಾನಗಳಲ್ಲಿ ಸ್ಪರ್ಧೆ ಮಾಡಿದ್ದರು. ನಾವು ಯಾವುದೇ ಪಕ್ಷಗಳ ಮನೆ ಬಾಗಿಲಿಗೆ ಹೋಗಬಾರದು ಅವರೇ ನಮ್ಮ ಬಳಿ ಬರಬೇಕು ಎಂದು ದೇವೇಗೌಡರು ಪದೇ, ಪದೇ ಹೇಳುತ್ತಿದ್ದರು. ಈಗ ಪ್ರತಿದಿನ ಯಡಿಯೂರಪ್ಪ ಅವರ ಮನೆ ಬಾಗಿಲು ತಟ್ಟುವ ಪರಿಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಈ ಹಿಂದೆ ರಾಮಕೃಷ್ಣ ಹೆಗಡೆ ಅವರು ಲೋಕಶಕ್ತಿ ಪಕ್ಷ ಸ್ಥಾಪಿಸಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡು 3 ಸ್ಥಾನಗಳನ್ನು ಗೆದ್ದರು. ಕರ್ನಾಟಕದಲ್ಲಿ ಈ ಪಕ್ಷ ಇತ್ತು ಎಂಬುದೇ ಜನಕ್ಕೆ ಮರೆತು ಹೋಗಿದೆ. ಇದೇ ಪರಿಸ್ಥಿತಿ ಜೆಡಿಎಸ್ ಪಕ್ಷಕ್ಕೆ ಖಂಡಿತಾ ಬರಲಿದೆ. ಜೆಡಿಎಸ್ ಕರ್ನಾಟಕದಿಂದ ಕಣ್ಮರೆ ಆಗುತ್ತದೆ. ಕೇವಲ ಮೂರು ಸ್ಥಾನಕ್ಕೆ ಅಂಗಲಾಚುತ್ತಿದೆ. ಸಿ.ಎಸ್.ಪುಟ್ಟರಾಜು ಅವರನ್ನೇ ಅಭ್ಯರ್ಥಿ ಎಂದು ಹೇಳಿ ಈಗ ನಾನೇ ಸ್ಪರ್ಧೆ ಮಾಡುತ್ತೇನೆ ಎನ್ನುತ್ತಿದ್ದಾರೆ ಕುಮಾರಸ್ವಾಮಿ. ಅಂದರೆ ಇವರಿಗೆ ಕುಟುಂಬ ಮಾತ್ರ ಮುಖ್ಯ. 2013ರ ಲೋಕಸಭಾ ಉಪಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯದಲ್ಲಿ ಬಿಜೆಪಿ ಬೆಂಬಲದಿಂದ ಜೆಡಿಎಸ್ ಸ್ಪರ್ಧೆ ಮಾಡಿತ್ತು. ಆದರೆ ಗೆದಿದ್ದು ಮಾತ್ರ ಕಾಂಗ್ರೆಸ್ ಪಕ್ಷ. ಕನಿಷ್ಠ 20 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ಜೆಡಿಎಸ್ ಪಕ್ಷದ ಆತ್ಮ ವಂಚನೆಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.