ಎಲ್ಲದಕ್ಕೂ ಹಿಂದಿನವರೇ ಕಾರಣ ಎಂಬ ಆರೋಪ ಸರಿಯಲ್ಲ: ಆರ್.ಅಶೋಕ್
ಆರ್.ಅಶೋಕ್
ಬೆಂಗಳೂರು : ಬಿಜೆಪಿ ಎಂದೂ ದ್ವೇಷದ ರಾಜಕಾರಣ ಮಾಡಿಲ್ಲ. ನಾವು ಆಡಳಿತ ಪಕ್ಷದಲ್ಲಿ ಸಂದರ್ಭದಲ್ಲಿ ಸಮಾಧಾನ ಚಿತ್ತದಿಂದ ಎಲ್ಲವನ್ನೂ ನಿರ್ವಹಿಸುತ್ತಿದ್ದೆವು. ಆದರೆ, ಈ ಕಾಂಗ್ರೆಸ್ ಸರಕಾರ ಎಲ್ಲದಕ್ಕೂ ಹಿಂದಿನವರೇ ಕಾರಣ ಎಂದು ಆರೋಪ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ದೂರಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರಕಾರ ಎಲ್ಲದಕ್ಕೂ ‘SIT’ ರಚಿಸುತ್ತಿದೆ. ಸಿಎಂ ಸಿದ್ದರಾಮಯ್ಯರ ಹಗರಣದ ವಿರುದ್ಧ ಕೆಂಪಣ್ಣ ಆಯೋಗ ರಚಿಸಿದ್ದು, ಅದರ ವರದಿ ಬಂದೇ ಇಲ್ಲ. ಕೋವಿಡ್ ಸಮಯದಲ್ಲಿ ಯಡಿಯೂರಪ್ಪ ಅಧಿಕಾರಿಗಳು ಹೇಳಿದಂತೆ ಖರೀದಿ ಮಾಡಲು ಸೂಚಿಸಿದ್ದಾರೆ. ಇದರಲ್ಲಿ ಯಾರದ್ದೂ ತಪ್ಪಿಲ್ಲ, ಇದು ರಾಜಕೀಯ ಪ್ರೇರಿತ ಸುಳ್ಳು ಪ್ರಕರಣ. ಈ ಪ್ರಕರಣ ಸರಕಾರಕ್ಕೆ ತಿರುಗುಬಾಣವಾಗಲಿದೆ ಎಂದು ಎಚ್ಚರಿಸಿದರು.
ವಕ್ಫ್ ಮಂಡಳಿ ಬಡವರ ಭೂಮಿ ಕಬಳಿಸುತ್ತಿರುವುದರಿಂದ ಎಲ್ಲರೂ ಭೀತಿಗೊಳಗಾಗಿದ್ದಾರೆ. ಸಚಿವ ಝಮೀರ್ ಅಹ್ಮದ್ ಇದರ ನೇತೃತ್ವ ವಹಿಸಿದ್ದಾರೆ. ಖುದ್ದು ಸಿಎಂ ಸಿದ್ದರಾಮಯ್ಯ ನೋಟಿಸ್ ವಾಪಸ್ ಪಡೆಯಲು ಸೂಚಿಸಲಾಗಿದೆ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಆದರೆ, ಮುಖ್ಯ ಕಾರ್ಯದರ್ಶಿ ಭೂಮಿ ವಶಪಡಿಸಿಕೊಳ್ಳಲು ಲಿಖಿತ ಸೂಚನೆ ನೀಡಿದ್ದಾರೆ. ಈ ಸತ್ಯ ಮರೆಮಾಚಲು ಸಿಎಂ ಸುಳ್ಳು ಹೇಳಿದ್ದಾರೆ ಎಂದು ದೂರಿದರು.
ಟಿಪ್ಪು ಸುಲ್ತಾನ್ ಖಡ್ಗ ಬಳಸಿ ಅಮಾಯಕರನ್ನು ಮತಾಂತರ ಮಾಡಿದ್ದ. ಅದೇ ರೀತಿ ಈಗ ಕಾಂಗ್ರೆಸ್ ವಕ್ಫ್ ಬಳಸಿಕೊಂಡು ಜನರ ಭೂಮಿ ಕಬಳಿಸುತ್ತಿದೆ. ವಿಶ್ವೇಶ್ವರಯ್ಯನವರು ಓದಿದ ಶಾಲೆಯನ್ನೂ ವಕ್ಫ್ ಆಸ್ತಿ ಎಂದು ಉಲ್ಲೇಖಿಸಲಾಗಿದೆ. 15ದಿನಗಳಲ್ಲಿ ಎಲ್ಲ ಆಸ್ತಿಗಳನ್ನು ವಕ್ಫ್ ಮಂಡಳಿಗೆ ಬರೆಯಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಟೀಕಿಸಿದರು.
ಬಸವರಾಜ ಬೊಮ್ಮಾಯಿ ಕಬಳಿಕೆ ಮಾಡಿದ ಭೂಮಿ ಹಿಂಪಡೆಯಿರಿ ಎಂದು ಹೇಳಿದ್ದಾರೆಯೇ ಹೊರತು, ರೈತರ ಜಮೀನು ಪಡೆಯಲು ಹೇಳಿಲ್ಲ. ಆದರೆ ಮಂಡಳಿಯ ಸದಸ್ಯರು ವಿಧಾನಸೌಧ ನಮ್ಮದು ಎಂದು ಹೇಳುತ್ತಿದ್ದಾರೆ. ಬಿಜೆಪಿ ಅವಧಿಯಲ್ಲಿ ಕೋಲಾರದಲ್ಲಿ ವಾಲ್ಮೀಕಿ ಭವನ ನಿರ್ಮಿಸಲಾಗಿತ್ತು. ಇದೀಗ ಅದರ ಮೇಲೆ ಮಸೀದಿ ಕಟ್ಟಿಸಿ ಕಾಂಪೌಂಡ್ ನಿರ್ಮಿಸಲಾಗಿದೆ ಎಂದು ಅವರು ವಾಗ್ದಾಳಿ ನಡೆಸಿದರು.