ಕನ್ನಡ ಪರ ಹೋರಾಟಗಾರರ ಧ್ವನಿ ಹತ್ತಿಕ್ಕುತ್ತಿರುವ ಸರಕಾರ: ಮುಖ್ಯಮಂತ್ರಿ ಚಂದ್ರು
ಬೆಂಗಳೂರು: ರಾಜ್ಯಗಳು ಉದಯವಾಗಿರುವುದೆ ಭಾಷೆಯ ಆಧಾರದ ಮೇಲೆ. ಕನ್ನಡ ಕಡ್ಡಾಯ ಎನ್ನುವ ಕಾನೂನು ಇದ್ದರೂ ಪಾಲಿಸದೆ ಇದ್ದಾಗ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದರು. ಅದನ್ನು ಎತ್ತಿ ತೋರಿಸಿದ್ದಕ್ಕೆ ಕನ್ನಡ ಪರ ಹೋರಾಟಗಾರರನ್ನು ಬಂಧಿಸಲಾಗಿದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯ ಸರಕಾರವು ಅಕ್ರಮವಾಗಿ ಬಂಧಿಸಿರುವ ಕನ್ನಡಪರ ಹೋರಾಟಗಾರರನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಅವರ ಮೇಲೆ ದಾಖಲಿಸಿರುವ ಎಲ್ಲ ಕೇಸುಗಳನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ನಗರದ ಫ್ರೀಡಂಪಾರ್ಕ್‍ನಲ್ಲಿ ನಡೆದ ಪ್ರತಿಭಟನೆಯ ನೇತೃತ್ವ ವಹಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿನ ವಾಣಿಜ್ಯ ಸಂಸ್ಥೆಗಳ ನಾಮಫಲಕಗಳು ಕನ್ನಡದಲ್ಲಿಯೇ ಇರಬೇಕು ಎಂಬ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಆಮ್ ಆದ್ಮಿ ಪಕ್ಷ ಹಾಗೂ ಕರ್ನಾಟಕ ಜಲಸಂರಕ್ಷಣಾ ಸಮಿತಿ ಬೆಂಬಲ ವ್ಯಕ್ತಪಡಿಸಿದೆ ಎಂದು ಅವರು ಹೇಳಿದರು.
ಕನ್ನಡ ಪರ ಹೋರಾಟಗಾರರು ಯಾರ ಮೇಲಾದರೂ ಹಲ್ಲೆ ಮಾಡಿದ್ದಾರಾ? ಕಾನೂನಿಗೆ ವಿರುದ್ಧವಾಗಿ ಹಾಕಿರುವ ನಾಮಫಲಕ ಕಿತ್ತುಹಾಕಿದ್ದಾರೆ. ನಿಯಮ ಪಾಲನೆಯಾಗಿಲ್ಲ ಎನ್ನುವುದನ್ನು ಎತ್ತಿ ತೋರಿಸಿದ್ದಾರೆ ಅಷ್ಟಕ್ಕೆ ಬಂಧಿಸಲಾಗಿದೆ. ಕೋಟಿ ಕೋಟಿ ಲೂಟಿ ಮಾಡಿದವರು, ಭ್ರಷ್ಟಾಚಾರ ಮಾಡಿವರನ್ನು ಸುಮ್ಮನೆ ಬಿಡುವ ಸರಕಾರ, ನಾಡು ನುಡಿಗಾಗಿ ಧ್ವನಿ ಎತ್ತಿದವರನ್ನು ಬಂಧಿಸುತ್ತಿದೆ. ಈ ಮೂಲಕ ಕನ್ನಡ ಪರ ಹೋರಾಟಗಾರರನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಚಂದ್ರು ತಿಳಿಸಿದರು.
ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಇರಬೇಕು ಎನ್ನುವ ನಿಯಮ ಇದ್ದರೂ ಯಾಕೆ ಪಾಲನೆಯಾಗುತ್ತಿಲ್ಲ, ಅಧಿಕಾರಿಗಳು ಏನು ಮಾಡುತ್ತಿದ್ದಾರೆ. ಹೋರಾಟ ಮಾಡುವ ಮುನ್ನವೇ ಎಚ್ಚೆತ್ತು ಕನ್ನಡ ನಾಮಫಲಕ ಹಾಕದವರ ವಿರುದ್ಧ ಕ್ರಮ ತೆಗೆದುಕೊಂಡಿದ್ದರೆ ಪ್ರತಿಭಟನೆ ಯಾಕೆ ನಡೆಯುತ್ತಿತ್ತು ಎಂದು ಅವರು ಪ್ರಶ್ನಿಸಿದರು.
ಕಾನೂನು ಪಾಲನೆಯಾಗಿಲ್ಲ ಅಂದಾಗ ಬಿಬಿಎಂಪಿ ಅಧಿಕಾರಿಗಳು ಆ ನಾಮಫಲಕಗಳನ್ನು ತೆರವು ಮಾಡಬೇಕಿತ್ತು, ಅವರ ನಿರ್ಲಕ್ಷ್ಯ ಇದಕ್ಕೆಲ್ಲ ಕಾರಣ. ಹೋರಾಟ ಮಾಡುವವರೆಗೂ ಸುಮ್ಮನೆ ಇದ್ದು, ಈಗ ಫೆ.28ರ ವರೆಗೆ ಗಡುವು ನೀಡಲಾಗಿದೆ. ರಾಜ್ಯದ ಎಲ್ಲ ಕಡೆ ನಾಮಫಲಕಗಳಲ್ಲಿ ನಿಯಮದಂತೆ ಕನ್ನಡ ಕಡ್ಡಾಯ ಆಗಬೇಕು ಎಂದು ಅವರು ಆಗ್ರಹಿಸಿದರು.