ಯುವಿಸಿಇಯನ್ನು ಐಐಟಿಗಿಂತಲೂ ಉನ್ನತ ದರ್ಜೆಯ ಶೈಕ್ಷಣಿಕ ಸಂಸ್ಥೆಯನ್ನಾಗಿ ಮಾಡಲು ಚಿಂತನೆ
ಡಾ.ಎಂ.ಸಿ. ಸುಧಾಕರ್
ಬೆಂಗಳೂರು : ದೇಶದ ಇತರೆ ಐಐಟಿ ಹಾಗೂ ಶೈಕ್ಷಣಿಕ ಸಂಸ್ಥೆಗಳಿಗಿಂತಲೂ ಅತ್ಯಂತ ವಿನೂತನ ಹಾಗೂ ಆಕರ್ಷಕ ವಿನ್ಯಾಸದಲ್ಲಿ ಯುನಿವರ್ಸಿಟಿ ಆಫ್ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನೀಯರಿಂಗ್ (ಯುವಿಸಿಇ) ಅಭಿವೃದ್ದಿಗೊಳಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದ್ದು, ಈಗಾಗಲೇ ವಿನ್ಯಾಸ ರಚನೆಗೆ ಟೆಂಡರ್ ಆಹ್ವಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ತಿಳಿಸಿದ್ದಾರೆ.
ಬುಧವಾರ ನಗರದಲ್ಲಿ ಯುನಿವರ್ಸಿಟಿ ಆಫ್ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಇಂಜಿನೀಯರಿಂಗ್ನ ಹಿರಿಯ ವಿದ್ಯಾರ್ಥಿಗಳ ಸಂಘ ಮತ್ತು ಯುವಿಸಿಇ ಫೌಂಡೇಶನ್ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯುವಿಸಿಇಅನ್ನು ವಿಶಿಷ್ಟ ಹಾಗೂ ದೇಶಕ್ಕೆ ಮಾದರಿಯಾಗುವಂತಹ ಶೈಕ್ಷಣಿಕ ಸಂಸ್ಥೆಯಾಗಿ ಅಭಿವೃದ್ದಿಗೊಳಿಸಲಾಗುವುದು ಎಂದರು.
ವಿಶ್ವದ ಇಂಜಿನೀಯರಿಂಗ್ ಕ್ಷೇತ್ರದಲ್ಲಿ ತಮ್ಮದೇ ಆದ ವಿಶೇಷ ಹೆಸರನ್ನು ಮೂಡಿಸಿರುವ ಸರ್.ಎಂ. ವಿಶ್ವೇಶ್ವರಯ್ಯರಿಂದ ಸ್ಥಾಪಿತವಾಗಿರುವ ಈ ಕಾಲೇಜನ್ನು ಐಐಟಿಯಂತೆ ಅಭಿವೃದ್ದಿಗೊಳಿಸಲು ನಮ್ಮ ಸರಕಾರ ಎಲ್ಲ ರೀತಿಯ ಸಹಕಾರ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಬಾರಿಯ ಆಯವ್ಯಯದಲ್ಲಿ 500 ಕೋಟಿ ರೂ.ಗಳ ಅನುದಾನ ನೀಡುವ ಘೋಷಣೆ ಮಾಡಿದ್ದಾರೆ. ಅಲ್ಲದೇ, ಪ್ರಸಕ್ತ ಸಾಲಿನಲ್ಲಿ 100 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದರು.
ಐಐಟಿ ಎಂದರೆ ಕೇವಲ ಘೋಷಣೆ ಅಷ್ಟೇ ಅಲ್ಲ ಅದಕ್ಕೆ ತಕ್ಕಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಮುಖ್ಯ. ಈ ಕನಸನ್ನು ನನಸು ಮಾಡುವುದು ನನ್ನ ಗುರಿಯಾಗಿದೆ. ಈಗಾಗಲೇ ಜ್ಞಾನಭಾರತಿ ಕ್ಯಾಂಪಸ್ನಲ್ಲಿ 50 ಏಕರೆ ಜಾಗವನ್ನು ನಿಗದಿಪಡಿಸಲಾಗಿದ್ದು ಅದನ್ನ ಯುವಿಸಿಇಗೆ ಹಸ್ತಾಂತರಿಸುವ ಕ್ರಮ ಕೈಗೊಳ್ಳಲಾಗಿದೆ. ಐಐಟಿ ಕ್ಯಾಂಪಸ್ನ್ನು ವಿನ್ಯಾಸಗೊಳಿಸುವ ನಿಟ್ಟಿನಲ್ಲಿ ಈಗಾಗಲೇ ಆಸಕ್ತಿ ವ್ಯಪಡಿಸುವಿಕೆಯ ಟೆಂಡರ್ ಕರೆಯಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಯುವಿಸಿಇ ಫೌಂಡೇಶನ್ನ ಅಧ್ಯಕ್ಷ ಬಿ.ವಿ.ಜಗದೀಶ್ ಮಾತನಾಡಿ, ಭಾರತ ದೇಶ ತನ್ನ ಆರ್ಥಿಕತೆಯನ್ನು 10 ಟ್ರಿಲಿಯನ್ ಗೆ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದೆ. ಈ ಸಂಧರ್ಭದಲ್ಲಿ ಎದುರಾಗುವ ಹಲವಾರು ಸಮಸ್ಯೆಗಳ ಪರಿಹಾರದಲ್ಲಿ ಉದ್ಯಮಿಗಳು ಪ್ರಮುಖ ಪಾತ್ರವಹಿಸಲಿದ್ದಾರೆ. ವಿದ್ಯಾರ್ಥಿಗಳು ಎಐ ಕ್ಷೇತ್ರ ಪ್ರಾಮುಖ್ಯತೆಯನ್ನು ಅರಿತುಕೊಂಡು ಅದರಲ್ಲಿ ತಮ್ಮದೇ ಆದ ಉದ್ಯಮವನ್ನು ಪ್ರಾರಂಭಿಸುವತ್ತ ಗಮನ ಹರಿಸಬೇಕು ಎಂದು ಕರೆ ನೀಡಿದರು.
ಇದೇ ವೇಳೆ ಯುವಿಸಿಇ ಫೌಂಡೇಶನ್ ವತಿಯಿಂದ 160 ವಿದ್ಯಾರ್ಥಿಗಳಿಗೆ ಸುಮಾರು 45 ಲಕ್ಷ ರೂ.ಗಳ ವಿದ್ಯಾರ್ಥಿ ವೇತನ ನೀಡಲಾಯಿತು. ಈ ಸಂಧರ್ಭದಲ್ಲಿ ಯುವಿಸಿಇ ಬೋರ್ಡ್ ಆಫ್ ಗೌವರ್ನರ್ಸ್ನ ಅಧ್ಯಕ್ಷ ಬಿ ಮುತ್ತುರಾಮನ್, ಯುವಿಸಿಇ ನಿರ್ದೇಶಕ ಪ್ರೊ.ಸುಭಾಶಿಸ್ ತ್ರಿಪಾಠಿ, ಯುವಿಸಿಇ ಫೌಂಡೇಶನ್ ಸ್ಕಾಲರ್ಶಿಪ್ ಸಮಿತಿಯ ಅಧ್ಯಕ್ಷ ರಾಮ ವಸಂತರಾಮ್, ಯುವಿಸಿಇ ಫೌಂಡೇಶನ್ ಅಧ್ಯಕ್ಷ ಮಾಧವ, ಕಾರ್ಯದರ್ಶಿ ಡಾ. ಅಲೀಸ್ ಅಬ್ರಾಹಂ ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.