ದೇಶದಲ್ಲಿ ಪ್ರಜಾಪ್ರಭುತ್ವ , ಸಂವಿಧಾನ, ಚುನಾವಣಾ ವ್ಯವಸ್ಥೆ ಮೇಲೆ ವ್ಯವಸ್ಥಿತ ದಾಳಿಯಾಗುತ್ತಿದೆ : ಸುರ್ಜೇವಾಲ
ಬೆಂಗಳೂರು: ಪ್ರಧಾನಿ ಮೋದಿಯವರು ಹಿಟ್ಲರ್ ಆಡಳಿತ ಮಾದರಿ ಸರ್ವಾಧಿಕಾರವನ್ನು ಹೇರುತ್ತಿದ್ದು, ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ, ಚುನಾವಣಾ ವ್ಯವಸ್ಥೆ ಮೇಲೆ ವ್ಯವಸ್ಥಿತ ದಾಳಿಯಾಗುತ್ತಿದೆ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಆಕ್ರೋಶ ವ್ಯಕ್ತಪಡಿಸಿದ್ದಾರೆ
ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸರ್ವಾಧಿಕಾರಿ ಮನಸ್ಥಿತಿಯ ಆಡಳಿತ ಭಾರತದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನುಂಗುತ್ತಿದೆ ಎಂದರು.
ಬಿ.ಆರ್.ಅಂಬೇಡ್ಕರ್, ಮಹಾತ್ಮ ಗಾಂಧಿ, ನೆಹರೂ, ಸರ್ದಾರ್ ವಲ್ಲಬಬಾಯಿ ಪಟೇಲ್, ಬಾಬು ರಾಜೇಂದ್ರ ಪ್ರಸಾದ್ ಅವರು ಸೇರಿದಂತೆ ಲಕ್ಷಾಂತರ ಸ್ವಾತಂತ್ರ್ಯ ಹೋರಾಟಗಾರರು ಕಟ್ಟಿದ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಜನಸಾಮಾನ್ಯರ ಹಕ್ಕುಗಳನ್ನು ಕಸಿಯಲಾಗಿದೆ. ಅದೇ ರೀತಿ ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿಗೊಳಿಸಿರುವುದು ಖಂಡನೀಯ ಕ್ರಮ ಎಂದು ಸುರ್ಜೇವಾಲ ತಿಳಿಸಿದರು.
ಸರಕಾರ ನಿಮ್ಮ ಬ್ಯಾಂಕ್ ಖಾತೆ, ಕ್ರೆಡಿಟ್ ಕಾರ್ಡ್ ಸೇರಿದಂತೆ ನಿಮ್ಮ ಎಲ್ಲಾ ಸಂಬಳವನ್ನು ಕಸಿದುಕೊಂಡರೆ ನೀವು-ನಾವು ಬದುಕುವುದು ಹೇಗೆ, ಆಡಳಿತ ಮಾಡುವವರು ನಿಮ್ಮ ಆರ್ಥಿಕತೆಯನ್ನು ಬಂದ್ ಮಾಡಿದರೆ ಸಂಸಾರ ನಡೆಸುವುದು ಹೇಗೆ? ಕುಟುಂಬದ ಸದಸ್ಯರು ಸಾಯುವುದು ಖಂಡಿತಾ. ಅದೇ ರೀತಿ ಮೋದಿ ನೇತೃತ್ವದ ಬಿಜೆಪಿ ಸರಕಾರ ವಿರೋಧ ಪಕ್ಷಗಳ ಕತ್ತು ಹಿಸುಕುತ್ತಿದೆ ಎಂದು ಸುರ್ಜೇವಾಲ ಹೇಳಿದರು.
ಮೋದಿ ಮತ್ತು ಅವರ ಏಜೆನ್ಸಿಗಳು ಕಾಂಗ್ರೆಸ್ ಪಕ್ಷದ 4 ಬೇರೆ, ಬೇರೆ ಬ್ಯಾಂಕ್‍ಗಳಲ್ಲಿ ಹೊಂದಿರುವ 11 ಖಾತೆಗಳನ್ನು ತಡೆಹಿಡಿದಿರುವುದು ಖಂಡನೀಯ. 2017-18ರಲ್ಲಿ ಕಾಂಗ್ರೆಸ್‍ಗೆ ದೇಣಿಗೆ ರೂಪದಲ್ಲಿ ಬಂದಿರುವ 199 ಕೋಟಿ ರೂ. ಹಣದಲ್ಲಿ 14 ಲಕ್ಷ ರೂ. ಹಣ ಕಾಂಗ್ರೆಸ್ ಸಂಸದರಿಂದ ನಗದು ರೂಪದಲ್ಲಿ ಪಡೆದಿದ್ದೇವೆ ಎನ್ನುವುದಷ್ಟೇ ಕ್ರಮ ತೆಗೆದುಕೊಳ್ಳಲು ಕಾರಣ. 31 ವರ್ಷಗಳ ಹಿಂದೆ 1994-95ರಲ್ಲಿ ಸಾರ್ವತ್ರಿಕ ಚುನಾವಣೆ ವೇಳೆ ಐಟಿ ಇಲಾಖೆ ಸ್ಪಷ್ಟವಾಗಿ ಹೇಳಿದೆ. ಬ್ಯಾಂಕ್ ಖಾತೆ ವಿವರಗಳನ್ನು 30 ದಿನ ತಡವಾಗಿ ನೀಡಿದರೆ ಸೆಕ್ಷನ್ 274 ಎಫ್ ಪ್ರಕಾರ 10 ಸಾವಿರ ದಂಡ ವಿಧಿಸಬಹುದು ಎಂದು ಹೇಳಿದೆ. ಅದರಂತೆ ದಂಡ ವಿಧಿಸಲಿ ಎಂದು ಸುರ್ಜೇವಾಲ ಹೇಳಿದರು.
ಬಿಜೆಪಿ ಮತ್ತು ಐಟಿ ಇಲಾಖೆ ಬಲವಂತವಾಗಿ ಕಾಂಗ್ರೆಸ್ ಪಕ್ಷದ ಮೇಲೆ ದ್ವೇಷ ರಾಜಕಾರಣ ಮಾಡುತ್ತಿದೆ. ಚುನಾವಣೆಗೆ 3 ವಾರಗಳು ಇರುವಾಗ ಈ ರೀತಿಯ ಘಟನೆಗಳು ದೇಶದಲ್ಲಿ ಎಂದಿಗೂ ನಡೆದಿರಲಿಲ್ಲ. ಇದು ನಮ್ಮ ಮೇಲಿನ ವ್ಯವಸ್ಥಿತ ದಾಳಿ. ಇದು ಅಕ್ರಮ ಹಾಗೂ ಬಲವಂತದ ಕ್ರಮ. 75 ವರ್ಷಗಳ ಇತಿಹಾಸದಲ್ಲಿಯೇ ಕೆಟ್ಟ ಕ್ರಮ ಇದಾಗಿದೆ ಎಂದು ಸುರ್ಜೇವಾಲ ತಿಳಿಸಿದರು.
ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿರುವ ಕಾರಣ ಕಾಂಗ್ರೆಸ್ ಜಾಹೀರಾತುಗಳನ್ನು ನೀಡಲು ಆಗುತ್ತಿಲ್ಲ, ಪಕ್ಷದ ಅಭ್ಯರ್ಥಿಗಳ ಚುನಾವಣಾ ಖರ್ಚಿಗೆ ಹಣ ನೀಡಲು ಆಗುತ್ತಿಲ್ಲ. ನಾಯಕರುಗಳು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಪ್ರಚಾರಕ್ಕೆ ತೆರಳಲು, ಯಾವುದೇ ಪ್ರಚಾರ ಸಾಮಗ್ರಿಗಳನ್ನು ಮುದ್ರಿಸಲು ಆಗುತ್ತಿಲ್ಲ. ಇದು ಸರ್ವಾಧಿಕಾರಿ ಸರಕಾರದ ಲಕ್ಷಣ ಎಂದು ಸುರ್ಜೇವಾಲ ಹೇಳಿದರು.
ಲೋಕಸಭಾ ಚುನಾವಣೆ ಹತ್ತಿರ ಇರುವಾಗಲೇ ಜಾರ್ಖಂಡ್ ರಾಜ್ಯದ ಮುಖ್ಯಮಂತ್ರಿ ಹೇಮಂತ್ ಸೋರೆನ್, ಹೊಸದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರನ್ನು ಮೋದಿ ಸರಕಾರ ಅಕ್ರಮವಾಗಿ ಬಂಧನ ಮಾಡಿದೆ. ವಿರೋಧ ಪಕ್ಷಗಳ ಅನೇಕ ನಾಯಕರ ಮೇಲೆ ಸುಳ್ಳು ಮೊಕದ್ದಮೆ ಹೂಡಿ ಜೈಲಿಗೆ ಕಳಿಸಲಾಗುತ್ತಿದೆ. ರಾಜ್ಯಪಾಲರನ್ನು ರಾಜ್ಯ ಸರಕಾರಗಳ ವಿರುದ್ದ ಬಳಸಿಕೊಳ್ಳಲಾಗುತ್ತಿದೆ. ಸರಕಾರದ ಆಡಳಿತದಲ್ಲಿ ಮೂಗು ತೂರಿಸಿ ರಾಜ್ಯಪಾಲರ ಮೂಲಕ ತೊಂದರೆ ನೀಡಲಾಗುತ್ತಿದೆ ಎಂದು ಸುರ್ಜೇವಾಲ ದೂರಿದರು.
ತಮಿಳುನಾಡಿನ ರಾಜ್ಯಪಾಲರು ಭಾಷಣ ಓದಲು ನಿರಾಕರಿಸುತ್ತಾರೆ. ಹಿಮಾಚಲ ಪ್ರದೇಶ, ಕೇರಳ, ಪಚ್ಚಿಮ ಬಂಗಾಳ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಆಡಳಿತ ನಡೆಸಲು ತಡೆ ಒಡ್ಡುತ್ತಿದ್ದಾರೆ. ಚುನಾವಣಾ ಆಯೋಗದ ಆಯುಕ್ತರ ನೇಮಕಾತಿ ವಿಚಾರದಲ್ಲಿ ಎಲ್ಲಾ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಬಿಜೆಪಿ ದೇಶದಲ್ಲಿ ಈ ಮೂಲಕ ಅರಾಜಕತೆ ಸೃಷ್ಟಿಸುತ್ತಿದೆ ಎಂದು ಸುರ್ಜೇವಾಲ ತಿಳಿಸಿದರು.