ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಯಾವುದೇ ತಾರತಮ್ಯ ಆಗಿಲ್ಲ: ಆರ್.ಅಶೋಕ್
ಬೆಂಗಳೂರು: ಕರ್ನಾಟಕಕ್ಕೆ ಬರಬೇಕಾದ ಎಲ್ಲ ಹಣ ರಾಜ್ಯಕ್ಕೆ ಬಂದಿದೆ. ಕರ್ನಾಟಕ ರಾಜ್ಯಕ್ಕೆ ಯಾವುದೇ ಬಾಕಿ ಇಲ್ಲ ಎಂದು ಸ್ವತಃ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟವಾಗಿ ಹೇಳಿದ್ದು, ಕೇಂದ್ರ ಸರಕಾರದಿಂದ ಯಾವುದೇ ತಾರತಮ್ಯ ಆಗಿಲ್ಲ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏನಾದರೂ ತಕರಾರು ಇದ್ದರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ರಾಜ್ಯಸಭೆಯಲ್ಲಿ ಮಾತನಾಡಬಹುದಿತ್ತು. ಡಿ.ಕೆ.ಸುರೇಶ್ ಅವರು ಲೋಕಸಭೆಯಲ್ಲಿ ಪ್ರಸ್ತಾಪ ಮಾಡಬಹುದಿತ್ತು ಅಲ್ಲವೇ?. 9 ವರ್ಷಗಳಿಂದ ಮೌನವಾಗಿದ್ದು, ಈಗ ಚುನಾವಣೆ ಬಂದಿದೆ ಎಂದು ನಾಟಕ ಆರಂಭಿಸಿದ್ದಾರೆ ಎಂದು ಟೀಕಿಸಿದರು.
ನೀವು ಅನುದಾನದ ವಿಚಾರವಾಗಿ ದೇಶದ ಲೆಕ್ಕಕ್ಕೆ ಹೋಗಬೇಡಿ, ಇಲ್ಲಿ ನಮ್ಮ ರಾಜ್ಯದ ವಿಷಯವನ್ನೆ ಹೇಳಿ. ಬೆಂಗಳೂರು ಒಂದರಿಂದಲೇ ರಾಜ್ಯದ ಶೇ.65 ತೆರಿಗೆ ಬರುತ್ತದೆ. ಹಾಗಾದರೆ ಬೆಂಗಳೂರಿಗೆ ಕೊಟ್ಟಿರೋದು ಎಷ್ಟು? ಉಳಿದ ಜಿಲ್ಲೆಗಳಿಗೆ ಸಿಕ್ಕಿರೋದು ಎಷ್ಟು? ಅನುದಾನ ತಾರತಮ್ಯಕ್ಕಾಗಿ ಕರ್ನಾಟಕದಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಬೇಕು ಎನ್ನುವ ಕೂಗಿತ್ತು. ಕರ್ನಾಟಕಕ್ಕೆ ನಾವು ನೀರು ಕೊಡುತ್ತೇವೆ, ನಾವು ಕಾಫಿ ಬೆಳೆಯುತ್ತೇವೆ. ನಾವು ಹೆಚ್ಚಿನ ತೆರಿಗೆ ಕಟ್ಟೋರು ಎಂದು ಕೊಡಗಿನವರು ಹೇಳಿದ್ದರು. ಆಗ ಸಿದ್ದರಾಮಯ್ಯ ಅವರೇ ತೆರಿಗೆ ಆಧಾರದ ಮೇಲೆ ರಾಜ್ಯ ಇಬ್ಭಾಗ ಮಾಡಲು ಆಗುವುದಿಲ್ಲ ಎಂದು ಹೇಳಿದ್ದರು ಎಂದು ಅಶೋಕ್ ಆಕ್ಷೇಪಿಸಿದರು.
ರಾಜ್ಯಕ್ಕೆ ಬೆಂಗಳೂರಿನಿಂದ ಶೇ.65ರಷ್ಟು ತೆರಿಗೆ ಬರುತ್ತದೆ. ಆದರೆ. ಸರಕಾರದಿಂದ ಬೆಂಗಳೂರಿಗೆ ಶೇ.5 ರಷ್ಟು ಅನುದಾನವನ್ನೂ ಕೊಟ್ಟಿಲ್ಲ. ಯಾವ ಜಿಲ್ಲೆಯಿಂದ ಎಷ್ಟು ಬರುತ್ತದೆಯೋ, ಅಷ್ಟು ಅನುದಾನ ಕೊಡಲು ಸಾಧ್ಯವಾ? ಎಲ್ಲಿ ಜನ ಕಷ್ಟದಲ್ಲಿದ್ದಾರೆ, ಎಲ್ಲಿ ಅಭಿವೃದ್ದಿ ಆಗಿಲ್ಲವೋ ಅಲ್ಲಿಗೆ ನೆರವಾಗಬೇಕು ಎಂಬುದು ಸಂವಿಧಾನ ಆಶಯ ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರದಿಂದ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಹಾಗೂ ನರೇಂದ್ರ ಮೋದಿ ಅವರ ಅವಧಿಯಲ್ಲಿ ರಾಜ್ಯಕ್ಕೆ ಒಟ್ಟು ಎಷ್ಟು ಅನುದಾನ ಸಿಕ್ಕಿದೆ ಎಂಬುದರ ಬಗ್ಗೆ ಶ್ವೇತ ಪತ್ರವನ್ನು ಹೊರಡಿಸಲಿ ಎಂದು ಸವಾಲು ಹಾಕಿದರು.