ಬೆಂಗಳೂರು ಕೇಂದ್ರ ಕ್ಷೇತ್ರದಲ್ಲಿ ಮತದಾನದ ಗೌಪ್ಯತೆ ಉಲ್ಲಂಘನೆಯಾಗಿಲ್ಲ : ರಾಜ್ಯ ಮುಖ್ಯ ಚುನಾವಣಾಧಿಕಾರಿ
ಬೆಂಗಳೂರು: ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ಹಿರಿಯ ನಾಗರಿಕರ ಮತದಾನದ ಸಮಯದಲ್ಲಿ ಮತದಾನದ ಗೌಪ್ಯತೆ ಮತ್ತು ಮತದಾರರಿಗೆ ಪ್ರಭಾವ ಬೀರುವ ಚಟುವಟಿಕೆಗಳು ನಡೆದಿವೆ ಎಂದು ಆರೋಪಿಸಿ ನೀಡಿದ್ದ ದೂರನ್ನು ಪರಿಶೀಲಿಸಲಾಗಿದ್ದು, ಯಾವುದೇ ರೀತಿಯಲ್ಲೂ ಮತದಾನದ ಗೌಪ್ಯತೆ ಉಲ್ಲಂಘನೆಯಾಗಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಮನೋಜ್ ಕುಮಾರ್ ಮೀನಾ ಸ್ಪಷ್ಟಪಡಿಸಿದ್ದಾರೆ.
ರವಿವಾರ ಈ ಬಗ್ಗೆ ಪತ್ರಿಕಾ ಪ್ರಕಟನೆ ಹೊರಡಿಸಿರುವ ಅವರು, ರಾಜಾಜಿನಗರದ ವಾರ್ಡ್ ಸಂಖ್ಯೆ 108ರ ಶ್ರೀರಾಮಮಂದಿರ ಸಮೀಪ ಎ.13ರಂದು 85 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರ ಮತದಾನದ ವೇಳೆ ಗೌಪ್ಯತೆ ಕಾಪಾಡಿಕೊಳ್ಳಲಾಗಿಲ್ಲ ಮತ್ತು ಮತದಾರರಿಗೆ ಪ್ರಭಾವ ಬೀರಲಾಗಿದೆ ಎಂದು ಬೆಂಗಳೂರು ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಏಜೆಂಟರು ದೂರು ನೀಡಿದ್ದರು. ಈ ಬಗ್ಗೆ ತುರ್ತಾಗಿ ತನಿಖೆ ನಡೆಸಲಾಗಿದ್ದು ಮತದಾರರಿಗೆ ಪ್ರಭಾವ ಬೀರುವ ಚಟುವಟಿಕೆಗಳೂ ನಡೆದಿಲ್ಲ ಎಂದಿದ್ದಾರೆ.
ಈ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿರುವ ಜಿಲ್ಲಾ ಚುನಾವಣಾಧಿಕಾರಿಗಳು ವರದಿಯನ್ನು ನೀಡಿದ್ದು, ವರದಿಯಲ್ಲಿ ವಿಡಿಯೋ ಚಿತ್ರೀಕರಣ, ಛಾಯಾಚಿತ್ರಗಳ ಪರಿಶೀಲನೆ ಹಾಗೂ ಮೈಕ್ರೋ ಅಬ್ಸರ್ವರ್ ಅವರ ವರದಿಯ ಆಧಾರದ ಮೇಲೆ ಮತದಾನದ ಗೌಪ್ಯತೆಯ ಉಲ್ಲಂಘನೆಯಾಗಿಲ್ಲ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.
ಒಂದು ಮನೆಯಿಂದ ಇನ್ನೊಂದು ಮನೆಗೆ ಮತದಾನದ ಪ್ರಕ್ರಿಯೆ ಮಾಡುವಾಗ ಪಿಆರ್ ಒ ಅವರ ಚುನಾವಣಾ ಗುರುತಿನ ಚೀಟಿ ಕಳೆದುಹೋಗಿದ್ದು, ಇನ್ನುಳಿದ ಪೋಲಿಂಗ್ ಅಧಿಕಾರಿಗಳು ಗುರುತಿನ ಚೀಟಿಯನ್ನು ಧರಿಸಿಕೊಂಡೇ ಕರ್ತವ್ಯ ನಿರ್ವಹಿಸಿದ್ದಾರೆ. ಪಿಆರ್ ಒ ಅವರಿಗೆ ತಕ್ಷಣ ಮತ್ತೊಂದು ಚುನಾವಣಾ ಗುರುತಿನ ಚೀಟಿಯನ್ನು ವಿತರಿಸಲಾಗಿದೆ. ಮತದಾನದ ಸಂದರ್ಭದಲ್ಲಿ ಚುನಾವಣಾ ಕರ್ತವ್ಯಗಳನ್ನು ನಿಯಮಾನುಸಾರ ನಿರ್ವಹಿಸಲಾಗಿದೆ. ಮತದಾನದ ಗೌಪ್ಯತೆಯನ್ನು ಉಲ್ಲಂಘನೆ ಹಾಗೂ ಯಾವುದೇ ಪಕ್ಷದ ಚುನಾವಣೆ ಅಭ್ಯರ್ಥಿಗಳ ಏಜೆಂಟರ್‍ಗಳ ಜೊತೆಗೂಡಿ ಮತದಾರರಿಗೆ ಪ್ರಭಾವ ಬೀರುವಂತಹ ಪ್ರಕ್ರಿಯೆಗಳು ನಡೆದಿಲ್ಲ. ಈ ಬಗ್ಗೆ ವಿಡಿಯೋ ತುಣುಕುಗಳಿಂದ ಖಚಿತಪಡಿಸಿಕೊಳ್ಳಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ಹೇಳಿದ್ದಾರೆ.
ದೂರುದಾರರು ಹೇಳಿರುವಂತೆ ಯಾವುದೇ ಮತದಾನದ ಅಧಿಕಾರಿ, ನೌಕರರು, ಕಂದಾಯ ನಿರೀಕ್ಷಕರು ಹಾಗೂ ಮೈಕ್ರೋ ಅಬ್ಸರ್ವರ್ ಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾದ ಅಂಶಗಳು ಕಂಡುಬಾರದೇ ಇರುವುದರಿಂದ ದೂರುದಾರರ ಅರ್ಜಿಗಳನ್ನು ಮುಕ್ತಾಯಗೊಳಿಸಲಾಗಿದೆ ಎಂದು ಮನೋಜ್ ಕುಮಾರ್ ಮೀನಾ ತಿಳಿಸಿದ್ದಾರೆ.