ಎಂ.ಎಂ.ಕಲಬುರ್ಗಿ, ಗೌರಿ ಲಂಕೇಶ್ ಕೊಲೆಯ ಹಿಂದೆ ರಾಷ್ಟ್ರೀಯ ಸಂಚು ನಡೆದಿತ್ತು: ಡಾ.ಕೆ.ಮರುಳಸಿದ್ದಪ್ಪ

ಬೆಂಗಳೂರು : ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ, ಪತ್ರಕರ್ತೆ ಗೌರಿ ಲಂಕೇಶ್ ಕೊಲೆಯ ಹಿಂದೆ ರಾಷ್ಟ್ರೀಯ ಸಂಚು ನಡೆದಿತ್ತು ಎಂದು ಹಿರಿಯ ವಿಮರ್ಶಕ ಡಾ.ಕೆ.ಮರುಳಸಿದ್ದಪ್ಪ ತಿಳಿಸಿದ್ದಾರೆ.
ಸೋಮವಾರ ನಗರದ ಚಿತ್ರಕಲಾ ಪರಿಷತ್‍ನಲ್ಲಿ ಬಸವ ಅಂತರ್ ರಾಷ್ಟ್ರೀಯ ಪ್ರತಿಷ್ಠಾನ, ಜಿಲ್ಲಾ ಶರಣ ಸಾಹಿತ್ಯ ಪರಿಷತ್, ಕದಳಿ ಮಹಿಳಾ ವೇದಿಕೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಡಾ.ಎಂ.ಎಂ. ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇಶದ ಉಪರಾಷ್ಟ್ರಪತಿಯೊಬ್ಬರು ಎಂ.ಎಂ.ಕಲಬುರ್ಗಿ ಅವರನ್ನು ಪ್ರೊಫೆಸರ್ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡಿದ್ದರು. ಆದರೆ ಕಲಬುರ್ಗಿ ಯಾವುದಕ್ಕೂ ಹೆದರಲಿಲ್ಲ. ಕೊನೆಯಲ್ಲಿ ಅವರನ್ನು ಕೊಲೆ ಮಾಡಲಾಯಿತು ಎಂದು ತಿಳಿಸಿದರು.
ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಕೊಂದವರು ಯಾರೇ ಇರಬಹುದು. ಆದರೆ ನಡೆದ ಸಂಚು ರಾಷ್ಟ್ರೀಯ ನೆಲೆಯಲ್ಲಿ ಕೋಮುವಾದಿಗಳು ಮಾಡಿದ ಕ್ರೂರವಾದ ಸಂಚು ಎಂದು ಹೇಳಿದರು.
ಎಂ.ಎಂ.ಕಲಬುರ್ಗಿ ಅವರ ಬಗ್ಗೆ ಮಾತನಾಡುವುದೆಂದರೆ ವಚನ ಸಾಹಿತ್ಯ, ಶರಣ ಸಾಹಿತ್ಯದ ಬಗ್ಗೆ ಮಾತನಾಡಿದಂತೆ. ಆ ಪರಂಪರೆಯನ್ನು ವ್ಯಾಖ್ಯಾನ ಮಾಡುವುದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟರು. 12ನೇ ಶತಮಾನದಲ್ಲಿ ಕನ್ನಡ ನಾಡಿನಲ್ಲಿ ನಡೆದ ಕ್ರಾಂತಿ ದೇಶದಲ್ಲೇ ಅದ್ಭುತವಾದ ಕ್ರಾಂತಿಯಾಗಿದೆ. ಕರ್ನಾಟಕದಲ್ಲಂತೂ ಸಾಂಸ್ಕøತಿಕ ಚಹರೆಯನ್ನೇ ಬದಲಾಯಿಸಿದೆ. ವಚನ ಸಾಹಿತ್ಯದಿಂದ ಕನ್ನಡ ಸಾಹಿತ್ಯ ಪರಂಪರೆ ಹೊಸ ದಾರಿಯನ್ನು ಹಿಡಿಯಿತು ಎಂದು ಅಭಿಪ್ರಾಯಪಟ್ಟರು.
ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಮಾತನಾಡಿ, ಇತ್ತೀಚಿಗೆ ಎಂ.ಎಂ.ಕಲಬುರ್ಗಿ ಮತ್ತು ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ ಆರೋಪಿಗಳಿಗೆ ಬಿಜಾಪುರದಲ್ಲಿ ಸನ್ಮಾನ ಮಾಡಲಾಯಿತು. ಅದರ ವಿರುದ್ಧ ನಾವು ಹೋರಾಟ ಮಾಡಿದೆವು. ಆದರೆ ಬಸವ ಸಮಿತಿ, ವೀರಶೈವ ಮಹಾವೇದಿಕೆಯವರು ಬಾಯಿ ಬಿಡಲಿಲ್ಲ. ಕೆಲವೇ ಕೆಲವು ಜನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.
ಬಸವಣ್ಣ ಅವರನ್ನು ಹಳ್ಳಿಹಳ್ಳಿಗೆ ತಲುಪಿಸಿದ ಕೀರ್ತಿ ದಲಿತ ಸಂಘರ್ಷ ಸಮಿತಿಗೆ ಸಲ್ಲುತ್ತದೆ. ಬಸವಣ್ಣ ಎಂದರೆ ದನಕ್ಕೆ ಪೂಜೆ ಮಾಡುತ್ತಿದ್ದೆವು. ಬಸವಣ್ಣವೆಂದರೆ ಕಲ್ಯಾಣ ಬಸವಣ್ಣ ಎನ್ನುವುದನ್ನು ತಿಳಿಸಿದ್ದು, ದಲಿತ ಸಂಘರ್ಷ ಸಮಿತಿ, ಬಾಬಾ ಸಾಹೇಬರು ಬರಿ ದಲಿತರಿಗಾಗಿ ಮಾತ್ರ ಕೆಲಸ ಮಾಡಲಿಲ್ಲ. ಅಂಬೇಡ್ಕರ್ ಅವರ ಇನ್ನೂ ಅನೇಕ ವಿಚಾರಗಳನ್ನು ಹೊರಗೆ ತರಬೇಕಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ಎಂ.ರೇವಣ್ಣ ಮಾತನಾಡಿ, ಕನ್ನಡ ಸಾಹಿತ್ಯದಲ್ಲಿ ಬೂಸಾ ಇದೆ. ಎಂದು ಬಸವಲಿಂಗಪ್ಪ ಅವರು ಹೇಳಿದ್ದರು. ಅವರು ಕನ್ನಡ ಸಾಹಿತ್ಯ ಬೂಸ ಎಂದು ಹೇಳಿರಲಿಲ್ಲ. ಆದರೆ ನನಗೆ ಬೇರೆ ಪ್ರಚೋದನೆ ಆಗಿತ್ತು. ಆ ಸಮಯದಲ್ಲಿ ಬಸವಲಿಂಗಪ್ಪ ಅವರನ್ನು ಪದಚ್ಯುತಿಗೊಳಿಸುವಲ್ಲಿ ಸಕ್ರಿಯನಾಗಿದ್ದು, ಅನ್ಯಾಯದ ಕೆಲಸ ಮಾಡಿದ್ದೇನೆ. ಅದರ ಬಗ್ಗೆ ಇವತ್ತಿಗೂ ಕೂಡ ನೋವಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ವೇಳೆ ದಲಿತ ಸಂಘರ್ಷ ಸಮಿತಿಯ ಪ್ರದಾನ ಸಂಚಾಲಕ ಮಾವಳ್ಳಿ ಶಂಕರ್ ಅವರಿಗೆ ಡಾ.ಎಂ.ಎಂ.ಕಲಬುರ್ಗಿ ಪ್ರಗತಿಪರ ಚಿಂತಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಾಟಕ ಅಕಾಡಮಿ ಅಧ್ಯಕ್ಷ ಕೆ.ವಿ.ನಾಗರಾಜಮೂರ್ತಿ, ಬಸವ ಪ್ರತಿಷ್ಠಾನದ ಅಧ್ಯಕ್ಷ ಎಸ್.ಮಹದೇವಯ್ಯ, ಇಂದಿರಾ ಕೃಷ್ಣಪ್ಪ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮತ್ತಿತರರು ಉಪಸ್ಥಿತರಿದ್ದರು.