ತಿರುಪತಿ ಲಡ್ಡು ವಿಚಾರ ತನಿಖೆಯಾಗಲಿ: ಸಚಿವ ಎಂ. ಬಿ ಪಾಟೀಲ್
ಬೆಂಗಳೂರು: ಧಾರ್ಮಿಕವಾಗಿ ಪಾವಿತ್ರ್ಯ ಹೊಂದಿರುವ ತಿರುಪತಿ ಲಡ್ಡುವಿಗೆ ಪ್ರಾಣಿಜನ್ಯ ಕೊಬ್ಬನ್ನು ಸೇರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಇದು ನಿಜವೇ ಆಗಿದ್ದಲ್ಲಿ ತುಂಬಾ ಆಘಾತಕಾರಿಯಾಗಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆದು, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಬೇಕು ಎಂದು ಬೃಹತ್ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಆಗ್ರಹಿಸಿದ್ದಾರೆ.
ಶನಿವಾರ ಇಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ಮೊದಲೆಲ್ಲ ಕೆಎಂಎಫ್ ತಿರುಪತಿಗೆ ತುಪ್ಪ ಪೂರೈಸುತ್ತಿತ್ತು. ಆಗ ಕಲಬೆರಕೆ ಇತ್ಯಾದಿ ಏನೂ ಇರಲಿಲ್ಲ. ಈ ಬಗ್ಗೆ ನಾನು ಕೆಎಂಎಫ್ ಅಧ್ಯಕ್ಷರ ಜತೆ ಕೂಡ ಮಾತನಾಡಿದ್ದೇನೆ. ಯಾರೇ ಆದರೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾರದು ಎಂದು ಅವರು ಅಭಿಪ್ರಾಯ ಪಟ್ಟರು.
ಮುನಿರತ್ನ ಹನಿಟ್ರ್ಯಾಪ್ ತಂತ್ರ ಆಘಾತಕಾರಿ
ಬಿಜೆಪಿ ಶಾಸಕ ಮುನಿರತ್ನ ಅವರು ಎಚ್ಐವಿ ಸೋಂಕಿತ ಮಹಿಳೆಯರನ್ನು ಬಳಸಿಕೊಂಡು ತಮ್ಮ ವಿರೋಧಿಗಳನ್ನು ಹನಿಟ್ರ್ಯಾಪ್ ಮಾಡುತ್ತಿದ್ದರು ಎನ್ನುವ ಸಂಗತಿ ಕೇಳಿಬಂದಿದೆ. ಇದರ ಸತ್ಯಾಸತ್ಯತೆ ನನಗೆ ಗೊತ್ತಿಲ್ಲ. ಇದು ನಿಜವೇ ಆಗಿದ್ದರೆ ಇದೊಂದು ತಲೆ ತಗ್ಗಿಸಬೇಕಾದ ಆಘಾತಕಾರಿ ವಿದ್ಯಮಾನವಾಗಿದೆ. ಇದರ ಬಗ್ಗೆಯೂ ತನಿಖೆ ನಡೆದು ಸತ್ಯಾಂಶ ಹೊರಬರಲಿ ಎಂದು ಸಚಿವರು ಹೇಳಿದ್ದಾರೆ.